ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಮಾಲೂರಲ್ಲಿ ಮರು ಮತ ಎಣಿಕೆಗೆ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಒತ್ತಾಯ
ಕೋಲಾರ: ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ವಿರುದ್ಧ 250 ಮತಗಳಿಂದ ಗೆದ್ದಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಮತ್ತು ಸಂಸದ ಮುನಿಸ್ವಾಮಿ ಅವರು ಮತ ಮರು ಎಣಿಕೆಗೆ ಒತ್ತಾಯ ಮಾಡಿದ್ದಾರೆ.
ಕುಮಟಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ 59,966 ಮತ ಪಡೆದು ಗೆದ್ದಿದ್ದಾರೆ. ಜೆಡಿಎಸ್ನ ಸೂರಜ್ ನಾಯ್ಕ್ ಸೋನಿ ಅವರು 59293 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರಿಗೆ ಹೊರಟ ಸಿದ್ದರಾಮಯ್ಯ
ಇಂದು ಬೆಳಗ್ಗೆಯಿಂದಲೂ ಸ್ವಕ್ಷೇತ್ರ ವರುಣಾದಲ್ಲಿಯೇ ಬೀಡುಬಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಕಾಂಗ್ರೆಸ್ ಬಹುಮತ ಬರುತ್ತಿದ್ದಂತೆ ವಾಪಸ್ ಬೆಂಗಳೂರಿಗೆ ಹೊರಟಿದ್ದಾರೆ. ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ನಿಂದ ಅವರು ವಾಯುಮಾರ್ಗದ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಯತ್ನಾಳ್ ಗೆಲುವಿಗೆ ವಿಜಯಪುರದಲ್ಲಿ ಭರ್ಜರಿ ಸಂಭ್ರಮ
ವಿಜಯಪುರದಲ್ಲಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಗೆಲುವನ್ನು ಅವರ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸುತ್ತಿದ್ದಾರೆ. ನಗರದ ಸಿದ್ದೇಶ್ವರ ದೇಗುಲದಿಂದ ಗೋದಾವರಿ ಹೊಟೇಲ್ ವರೆಗೆ ಬೈಕ್ ರ್ಯಾಲಿ ನಡೆಸಿದ್ದಾರೆ. ಕೇಸರಿ ಬಣ್ಣದಲ್ಲಿ ಮಿಂದೆದ್ದಿದ್ದಾರೆ.
ಕೊಪ್ಪಳದಲ್ಲಿ ಕರಡಿ ಸಂಗಣ್ಣನ ಸೊಸೆಗೆ ಸೋಲು
ಕೊಪ್ಪಳದಲ್ಲಿ ಕಾಂಗ್ರೆಸ್ನ ರಾಘವೇಂದ್ರ ಹಿಟ್ನಾಳ್ ಗೆದ್ದಿದ್ದಾರೆ. ಇಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹಾಕಿ ಸೊಸೆ ಮಂಜುಳಾಗೆ ಟಿಕೆಟ್ ಕೊಡಿಸಿದ್ದರು. 2013 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರಡಿ ಸಂಗಣ್ಣ ಸೋತಿದ್ದರು. 2018ರಲ್ಲಿ ಸಂಗಣ್ಣನ ಪುತ್ರ ಅಮರೇಶ್ ಕರಡಿ ಸೋತಿದ್ದರು. ಈ ಸಲ ಅವರ ಸೊಸೆ ಸೋಲುಂಡಿದ್ದಾರೆ.