ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಕನಕಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಡಿ.ಕೆ.ಶಿವಕುಮಾರ್ ಅವರು ರಾಮನಗರಕ್ಕೆ ಭೇಟಿ ನೀಡಿ ಮಾತನಾಡಿದರು. ಅಲ್ಲಿ ಡಿಕೆಶಿಯನ್ನು ನೋಡಿ ಕಾರ್ಯಕರ್ತರು, ಅಭಿಮಾನಿಗಳು ವಿಜಯದ ಹರ್ಷೋಧ್ಘಾರ ಮಾಡಿದರು. ಆದರೆ ಅಲ್ಲಿ ಕಾರ್ಯಕರ್ತರ ನೂಕುನುಗ್ಗಲಿನ ವೇಳೆ ಡಿಕೆಶಿವಕುಮಾರ್ ಕೈಯಿಗೆ ಗಾಯವಾಗಿ ರಕ್ತ ಸುರಿದಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿರುವ ಬೊಮ್ಮಾಯಿ
ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ. ಸಂಜೆ ಅವರು ರಾಜಭವನಕ್ಕೆ ತೆರಳಲಿದ್ದಾರೆ.
ಚಿಕ್ಕಮಗಳೂರಲ್ಲಿ ಸಿಟಿ ರವಿ ಅವರು ಕಾಂಗ್ರೆಸ್ನ ಎಚ್.ಡಿ.ತಮ್ಮಯ್ಯ ವಿರುದ್ಧ ಸೋತಿದ್ದಾರೆ. ಹಾಗೇ, ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ವೆಂಕಟೇಶ್ಗೆ ಗೆಲುವಾಗಿದೆ.
ಇವಿಎಂ ಯಂತ್ರ ಹಾಳು
ಕುಮಟಾ ಕ್ಷೇತ್ರದಲ್ಲಿ 2 ಇವಿಎಂ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಮತ ಎಣಿಕೆಗೆ ಅಡ್ಡಿಯಾಗಿದೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಇತ್ತು. ಭದ್ರಾವತಿ ಒಂದು ಬೂತ್ನಲ್ಲಿ ಇವಿಎಂ ಯಂತ್ರ ಹಾಳಾಗಿದೆ. 600 ಮತಗಳಿದ್ದ ಬಸಲಿಕಟ್ಟೆ ಗ್ರಾಮದ ಬೂತ್ನ ಇವಿಎಂ ಯಂತ್ರ ಕೈಕೊಟ್ಟಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ಗೆದ್ದಿದ್ದಾರೆ. ಇತ್ತ ಚಿಕ್ಕಮಗಳೂರಲ್ಲಿ 18ನೇ ಸುತ್ತಿನ ಮತ ಎಣಿಕೆ ನಂತರವೂ ಸಿ.ಟಿ.ರವಿಗೆ ಹಿನ್ನಡೆಯಾಗಿದೆ.