ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಯಶವಂತ್ಪುರದಲ್ಲಿ ಎಸ್.ಟಿ.ಸೋಮಶೇಖರ್ ಗೆಲುವು, ಪದ್ಮನಾಭನಗರದಲ್ಲಿ ಆರ್.ಅಶೋಕ್, ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್, ಆರ್ ಆರ್ ನಗರದಲ್ಲಿ ಮುನಿರತ್ನ ಗೆದ್ದು ಬೀಗಿದ್ದಾರೆ.
ವರುಣಾದಲ್ಲಿ ಸಿದ್ದರಾಮಯ್ಯ ಹವಾ, ಸೋಮಣ್ಣಗೆ ಸೋಲು ಖಚಿತ!
ಮೈಸೂರು: ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಸದ್ಯ ಅವರಿಗೆ 98,035 ಮತಗಳು ಬಿದ್ದಿವೆ. ಸೋಮಣ್ಣಗೆ ಕೇವಲ 5794 ಮತಗಳು ಬಿದ್ದಿವೆ. ಈಗಾಗಲೇ ಚಾಮರಾಜನಗರದಲ್ಲಿ ಸೋತಿರುವ ವಿ.ಸೋಮಣ್ಣನವರಿಗೆ ವರುಣಾದಲ್ಲೂ ಸೋಲು ಕಟ್ಟಿಟ್ಬಬುತ್ತಿಯೇ ಆಗಿದೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ಕುಸಿತ
ಈ ಸಲ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಈ ಹಳೇ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿತ್ತು. ಕಳೆದ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಈ ಸಲ ಮಂಡ್ಯದಲ್ಲಿ ಕೇವಲ 1 ಮತ್ತು ಹಾಸನದಲ್ಲಿ ಕೇವಲ 4 ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಗೆದ್ದುಕೊಂಡಿದೆ.
ಕಲಬುರಗಿ: ಅಫಜಲ್ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ್ ಗೆಲುವಿನ ಹಿನ್ನೆಲೆಯಲ್ಲಿ ಅಫ್ಜಲ್ಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಪಾಟೀಲ್ ಅವರ ಅಭಿಮಾನಿಗಳು ವಿಜಯೋತ್ಸವ ಆಚರಣೆ ಮಾಡಿದ್ದಾರೆ.
ತುಮಕೂರಿನ ತಿಪಟೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿ ಗೆದ್ದಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಿ.ಸಿ.ನಾಗೇಶ್ ಸ್ಪರ್ಧಿಸಿದ್ದರು. ಈ ಬಾರಿ ಷಡಕ್ಷರಿ ಅವರು ಬಿ.ಸಿ.ನಾಗೇಶ್ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಅವರು ಗೆದ್ದಿದ್ದಾರೆ.