ಮತದಾನಕ್ಕೆ ಬರುತ್ತಿದ್ದ ವ್ಯಕ್ತಿ ಮೇಲೆ ಆನೆ ದಾಳಿ.
ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಎಂಬುವರು ಮತದಾನಕ್ಕೆಂದು ಬರುತ್ತಿದ್ದಾಗ ಕಾಡಾನೆ ದಾಳಿನಡೆಸಿದ್ದು, ಗಂಭೀರಗಾಯಗೊಂಡ ಅವರು ಮೃತಪಟ್ಟಿದ್ದಾರೆ.
ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ಈ ಘಟನೆ ನಡೆದಿದೆ.
ಕಾಲಿನಿಂದ ಮತ ಚಲಾವಣೆ
ವಿಜಯನಗರ ಜಿಲ್ಲೆಯ ಗುಂಡುಮುಣುಗು ಗ್ರಾಮದ ಅಂಗವಿಕಲೆ ಲಕ್ಷ್ಮೀದೇವಿ ಕಾಲಿನಿಂದ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.
ಮತಗಟ್ಟೆಯಲ್ಲಿ ಕುಸಿದು ಬಿದ್ದು ಸಾವು
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ರೇಣುಕಾಪುರದಲ್ಲಿ ಮತಗಟ್ಟೆಗೆ ಆಗಮಿಸಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ರೇಣುಕಾಪುರ ನಿವಾಸಿ ಅಮೀರ್ ಸಾಬ್ (56) ಎಂದು ಗುರುತಿಸಲಾಗಿದೆ. ಮತಗಟ್ಟೆಯ ಒಳ ಭಾಗದಲ್ಲೇ ಅಮೀರ್ ಸಾಬ್ ಕುಸಿದು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರ ಬಹುದೆಂದು ಶಂಕಿಸಲಾಗುತ್ತಿದೆ.
ಕೊಡಗಿನಲ್ಲಿ ಲಾಠಿ ಚಾರ್ಜ್
ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಮತಗಟ್ಟೆಯಲ್ಲಿ ಲಾಠಿ ಚಾರ್ಜ್ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಎರಡು ಮತಗಟ್ಟೆ, ಅದರಲ್ಲಿ ಒಂದು ಮತಗಟ್ಟೆಯಲ್ಲಿ ಕ್ಯೂ ಹೆಚ್ಚಿತ್ತು. ಹೀಗಾಗಿ ಉರಿ ಬಿಸಿಲಿನಲ್ಲಿ ನಿಂತ ಮತದಾರರು ನೀರು ಕೇಳಿದಾಗ ಗಲಾಟೆ ನಡೆದಿದೆ.
ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮತದಾರರು ಮತದಾನ ಬಹಿಷ್ಕರಿಸಲು ನಿರ್ಧಿರಿಸಿದ್ದಾರೆ.
ಪುತ್ತೂರಿನಲ್ಲಿ ಗಲಾಟೆ
ತೀವ್ರ ಕುತೂಹಲ ಕೆರಳಿಸಿರುವ ಪುತ್ತೂರಿನಲ್ಲಿ ಕಾಸರಗೋಡಿನ ರಾಷ್ಟ್ರೀಯ ಸ್ಚಯಂ ಸೇವಕ ಸಂಘದ ಮುಖಂಡ ಹುಬ್ಬಳ್ಳಿ ರಮೇಶ್ ಪುತ್ತೂರಿಗೆ ಆಗಮಿಸಿದ್ದು ಅವರ ಮೇಲೆ ಹಿಂದೂ ಕಾರ್ಯಕರ್ತರು ಮುಗಿಬಿದ್ದಿದ್ದಾರೆ.
ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿತ ಹಿಂದೂ ಕಾರ್ಯಕರ್ತರು ರಮೇಶ್ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ