ಏಕಬಳಕೆಯ ಪ್ಲಾಸ್ಟಿಕ್ ಚೀಲಗಳ ಹಾವಳಿ ಮಿತಿಮೀರಿದೆ. ಇದರ ಬದಲಿಗೆ ಹತ್ತಿಬಟ್ಟೆಯ ಕೈಚೀಲಗಳನ್ನು ಬಳಸಿ. ಇವುಗಳನ್ನು ವರ್ಷಾನುಗಟ್ಟಲೆ ಮರುಬಳಕೆ ಮಾಡಬಹುದು ಮತ್ತು ಬೇಗ ಮಣ್ಣಾಗಿಸಲೂಬಹುದು.
ಹಲ್ಲುಜ್ಜುವ ಬ್ರಷ್‌ಗಳನ್ನು ಆಗಾಗ ಬದಲಾಯಿಸುವುದು ಅನಿವಾರ್ಯ. ಹಾಗಾಗಿ ಪ್ಲಾಸ್ಟಿಕ್ ಬ್ರಷ್‌ಗಳ ಬದಲಿಗೆ ಬಿದಿರಿನ ಹಿಡಿಕೆಗಳಿರುವ ಬ್ರಷ್ ಬಳಸಿದರೆ ಇನ್ನಷ್ಟು ಮಾಲಿನ್ಯವನ್ನು ತಪ್ಪಿಸಬಹುದು.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿಟ್ಟುಕೊಳ್ಳುವುದರಿಂದ ಕುಡಿಯುವ ನೀರಿಗೂ ರಾಸಾಯನಿಕಗಳ ಸೇಚನವಾಗುತ್ತದೆ. ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಗಳನ್ನು ಬಳಸಿ. ಹಲವಾರು ವರ್ಷಗಳವರೆಗೆ ಅವುಗಳನ್ನು ಮರುಬಳಕೆ ಮಾಡಬಹುದು.
ಪರಿಸರಕ್ಕೆ ಹಾನಿ ಮಾಡುವ ಸ್ಯಾನಿಟರಿ ನ್ಯಾಪ್‌ಕಿನ್‌ನಂಥವು ಮಾಲಿನ್ಯಕ್ಕೆ ದೊಡ್ಡಮಟ್ಟದ ಕೊಡುಗೆಯನ್ನು ನೀಡುತ್ತಿವೆ. ಬದಲಿಗೆ ಮುಟ್ಟಿನ ಕಪ್‌ಗಳನ್ನು ಬಳಸುವುದು ಹಲವಾರು ವರ್ಷಗಳವರೆಗೆ ಸುರಕ್ಷಿತ, ಅನುಕೂಲಕರವೆಂದು ಪರಿಗಣಿತವಾಗಿವೆ.
ಶಿಶುಗಳ ಡೈಪರ್‌ಗಳಿಂದಲೂ ಸಾಕಷ್ಟು ಪ್ಲಾಸ್ಟಿಕ್ ವಾತಾವರಣಕ್ಕೆ ಸೇರುತ್ತಿದೆ. ಏಕಬಳಕೆಯ ಡೈಪರ್‌ಗಳ ಬದಲಿಗೆ ಬಟ್ಟೆಯ ಡೈಪರ್‌ಗಳು ಮರುಬಳಕೆಗೆ ಅನುಕೂಲ, ಸುರಕ್ಷಿತ ಮತ್ತು ಆರಾಮದಾಯಕ.
ಕಸ ಹಾಕುವುದಕ್ಕೆ ಪ್ಲಾಸ್ಟಿಕ್ ಲೈನರ್‌ಗಳ ಬಳಕೆ ಸಾಮಾನ್ಯ. ಬದಲಿಗೆ, ಕಾಂಪೋಸ್ಟ್ ಮಾಡಬಲ್ಲಂಥ ಲೈನರ್‌ಗಳನ್ನು ಬಳಸಿದರೆ ಪ್ಲಾಸ್ಟಿಕ್ ಹಾವಳಿಯ ನಿಯಂತ್ರಣಕ್ಕೆ ಸಹಕಾರಿ.
ಎಳನೀರು ಕುಡಿಯುವುದರಿಂದ ಹಿಡಿದು ಸೋಡಾ, ಜ್ಯೂಸ್‌ವರೆಗೆ ಎಲ್ಲದಕ್ಕೂ ಸ್ಟ್ರಾ ಬಳಕೆಯಾಗುತ್ತಿದೆ. ಇಲ್ಲಿಯೂ ಪ್ಲಾಸ್ಟಿಕ್ ಸ್ಟ್ರಾಗಳ ಬದಲು ಪೇಪರ್ ಕೊಳವೆಗಳನ್ನು ಬಳಸುವುದು ಒಳ್ಳೆಯದು. ಸ್ಟ್ರಾ ಬಳಕೆಯನ್ನೇ ಮಾಡದಿದ್ದರೆ ಇನ್ನೂ ಒಳ್ಳೆಯದು!
ಬರ್ಗರ್, ಬರ್ರಿಟೊ, ಪರಾಟಾದಂಥ ಬಹಳಷ್ಟು ಆಹಾರಗಳನ್ನು ಪ್ಲಾಸ್ಟಿಕ್ ರಾಪ್‌ನಲ್ಲಿ ಸುತ್ತುವುದು ಅಭ್ಯಾಸವಾಗಿದೆ. ಬದಲಿಗೆ, ಜೇನುಮೇಣದಲ್ಲಿ ತಯಾರಿಸಲಾದ ರಾಪ್‌ಗಳು ಆಹಾರ ಮತ್ತು ಪರಿಸರ- ಎರಡಕ್ಕೂ ಸುರಕ್ಷಿತ
ಪಾರ್ಟಿ, ಪಿಕ್‌ನಿಕ್‌ನಿಂದ ಹಿಡಿದು ದಾರಿಬದಿಯ ಮಸಾಲೆಪುರಿಯವರೆಗೆ ಪ್ಲಾಸ್ಟಿಕ್ ಚಮಚ, ಫೋರ್ಕ್‌ಗಳದ್ದೇ ರಾಜ್ಯ. ಇಲ್ಲಿಯೂ ಮರುಬಳಕೆಯ ಕಟ್ಲರಿಗಳು ಸೂಕ್ತ. ನಮ್ಮನಮ್ಮ ಕಟ್ಲರಿ ಕಿಟ್ ನಮ್ಮ ಜೊತೆಗಿದ್ದರೂ ಹೆಚ್ಚು ಸೂಕ್ತ
ಎಲ್ಲಾದರೂ ಚಾ-ಕಾಫಿ ಹೀರುವ ಬಯಕೆಯಾದರೆ ಪ್ಲಾಸ್ಟಿಕ್ ಕಪ್ಗಳಲ್ಲೇ ನಮಗದು ದೊರೆಯುತ್ತದೆ. ಇಲ್ಲಿಯೂ ಪರಿಸರ-ಸ್ನೇಹಿ ಅಥವಾ ಮರುಬಳಕೆಯ ಕಪ್‌ಗಳ ಮೊರೆ ಹೋಗುವುದು ನಮ್ಮದೇ ಭವಿಷ್ಯದ ದೃಷ್ಟಿಯಿಂದ ಅಗತ್ಯ