ನವದೆಹಲಿ: ದೇಶ್(Desh), ಬಿಂದಾಸ್(Bindaas) ಸೇರಿದಂತೆ ಭಾರತೀಯ ಇಂಗ್ಲಿಷ್‌ನ ಸುಮಾರು 800 ಪದಗಳನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಗೆ (Oxford English Dictionary-OED) ಸೇರಿಸಲಾಗಿದೆ. ಉಚ್ಚಾರಣೆ ಸಹಿತ ಪ್ರತಿಲಿಪಿ ಮತ್ತು ಆಡಿಯೋದೊಂದಿಗೆ ಈ ಪದಗಳನ್ನು ನಿಘಂಟಿಗೆ ಸೇರ್ಪಡೆ ಮಾಡಲಾಗಿದೆ. ಹೊಸದಾಗಿ ಸೇರ್ಪಡೆಯಾಗಿರುವ ಜಾಗತಿಕ ಇಂಗ್ಲಿಷ್ ಉಚ್ಚಾರಣೆಯ ಆಡಿಯೋ, ಭಾರತೀಯ ಇಂಗ್ಲಿಷ್ ಮಾತನಾಡುವವರ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ ಎಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ ಹೇಳಿದೆ.
ದೇಶ್, ಬಿಂದಾಸ್ ಮಾತ್ರವಲ್ಲದೇ, ದಿಯಾ(ದೀಪ), ಬಚ್ಚಾ(ಮಗು), ಅಲ್ಮೇರಾ(ಬೀರು) ಸೇರಿದಂತೆ ಹಲವು ಪದಗಳನ್ನು ಆಕ್ಸ್‌ಫರ್ಡ್ ನಿಘಂಟಿಗೆ ಸೇರ್ಪಡೆ ಮಾಡಲಾಗಿದೆ. ಆಕ್ಸ್‌ಫರ್ಡ್ ನಿಘಂಟಿಗೆ ಪ್ರತಿ ವರ್ಷ ಹೊಸ ಹೊಸ ಪದಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಆ ಮೂಲಕ ಇಂಗ್ಲಿಷ್ ಭಾಷೆಯ ವ್ಯಾಪಕತೆಯೂ ಹೆಚ್ಚಾಗುತ್ತಾ ಸಾಗುತ್ತದೆ.
ಇದನ್ನೂ ಓದಿ: Foreign university | ಭಾರತದಲ್ಲಿ ಫಾರಿನ್ ಯುನಿವರ್ಸಿಟಿ? ಯಾಲೆ, ಆಕ್ಸ್‌ಫರ್ಡ್ ವಿವಿಯಿಂದ ಪದವಿ ಪಡೆಯಬಹುದು!
ಬ್ರಿಟನ್ ಮತ್ತು ಅಮೆರಿಕ ಇಂಗ್ಲಿಷ್ ಹೊರತುಪಡಿಸಿ ಇಂಗ್ಲಿಷ್‌ನ ವಿವಿಧ ಉಚ್ಚಾರಣೆಗಳ ಕುರಿತಾಗಿ ನಮ್ಮ ಆಡಿಯೊವನ್ನು ವಿಸ್ತರಿಸುವ ಕೆಲಸ ಪ್ರಾರಂಭಿಸಿದಾಗಿನಿಂದ ಭಾರತೀಯ ಇಂಗ್ಲಿಷ್ ನಮ್ಮ ಪ್ರಮುಖ ಆದ್ಯತೆಯಾಗಿತ್ತು. ಅಲ್ಲದೇ, ಇದು ಬಹುದೊಡ್ಡ ಸವಾಲು ಕೂಡ ಆಗಿತ್ತು ಎಂದು ಆಕ್ಸ್‌ಫರ್ಡ್ ನಿಘಂಟಿನ ಡಾ. ಕ್ಯಾಥರಿನ್ ಸಾಂಗ್‌ಸ್ಟೆರ್ ಅವರು ಹೇಳಿದ್ದಾರೆ.