Site icon Vistara News

ಸಲ್ಮಾನ್‌ ಖಾನ್‌ಗೆ ಸಿಕ್ತು ಬಂದೂಕು ಲೈಸೆನ್ಸ್‌; ಬುಲೆಟ್‌ ಪ್ರೂಫ್‌ ಕಾರು ಕೂಡ ಖರೀದಿಸಿದ ಬಾಲಿವುಡ್‌ ನಟ

salman Khan

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಗೆ ಮುಂಬೈ ಪೊಲೀಸರು ಬಂದೂಕು ಪರವಾನಗಿ ನೀಡಿದ್ದಾರೆ. ಪಂಜಾಬ್‌ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಬೆನ್ನಲ್ಲೇ ಸಲ್ಮಾನ್‌ ಖಾನ್‌ಗೆ ಕೂಡ ಜೀವ ಬೆದರಿಕೆ ಬಂದಿತ್ತು. ಹೀಗಾಗಿ ತಮಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಲೈಸೆನ್ಸ್‌ ಕೊಡಿ ಎಂದು ಸಲ್ಮಾನ್‌ ಖಾನ್‌ ಮನವಿ ಮಾಡಿದ್ದರು. ಕಳೆದ ತಿಂಗಳು ಮುಂಬೈ ಪೊಲೀಸ್‌ ಆಯುಕ್ತ ವಿವೇಕ್ ಫನ್ಸಾಲ್ಕರ್‌ರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಸೂಕ್ತ ಪರಿಶೀಲನೆ ನಡೆಸಿ, ಈಗ ಸಲ್ಮಾನ್‌ ಖಾನ್‌ಗೆ ಬಂದೂಕು ಪರವಾನಗಿ ಕೊಡಲಾಗಿದೆ.

ಮೇ 29ರಂದು ಗಾಯಕ ಸಿಧು ಮೂಸೆ ವಾಲಾ ಹತ್ಯೆಯಾಗಿತ್ತು. ಈ ಹತ್ಯೆಯ ಸಂಚು ರೂಪಿಸಿದ್ದ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಮತ್ತು ಕೆನಡಾ ಮೂಲದ ಗೋಲ್ಡಿ ಬ್ರಾರ್‌ ಹೆಸರಲ್ಲಿ ಸಲ್ಮಾನ್‌ ಖಾನ್‌ಗೆ ಬೆದರಿಕೆ ಪತ್ರ ಬಂದಿತ್ತು. ಹಾಗಂತ ಇವರಿಬ್ಬರ ಹೆಸರು ಪೂರ್ತಿಯಾಗಿ ಉಲ್ಲೇಖ ಆಗಿರಲಿಲ್ಲ. ಬದಲಿಗೆ ಎಲ್‌.ಬಿ. ಮತ್ತು ಜಿ.ಬಿ. ಎಂದಷ್ಟೇ ಇತ್ತು. 2018ರಲ್ಲಿ ಕೂಡ ಸಲ್ಮಾನ್‌ ಖಾನ್‌ಗೆ ಲಾರೆನ್ಸ್‌ ಬಿಷ್ಣೋಯಿ ಜೀವ ಬೆದರಿಕೆ ಹಾಕಿದ್ದ. ಕೃಷ್ಣಮೃಗ ಕೊಂದ ಸಲ್ಮಾನ್‌ ಖಾನ್‌ರನ್ನು ನಾವೆಂದೂ ಕ್ಷಮಿಸುವುದಿಲ್ಲ. ಅವರನ್ನು ಬಿಡುವುದೂ ಇಲ್ಲ ಎಂದು ಹೇಳಿದ್ದ. ಪ್ರಕೃತಿ ಆರಾಧಕರಾದ ಬಿಷ್ಣೋಯಿ ಸಮುದಾಯದವರ ಪಾಲಿಗೆ ಕೃಷ್ಣಮೃಗ ತುಂಬ ಮಹತ್ವದ ಪ್ರಾಣಿ. ಅದನ್ನು ಕೊಂದ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ಗೆ ಈಗಾಗಲೇ ಜೈಲು ಶಿಕ್ಷೆಯೂ ಆಗಿದೆ. ಇದೇ ಕಾರಣಕ್ಕೆ ಬಿಷ್ಣೋಯಿ ಸಲ್ಮಾನ್‌ಗೆ ಜೀವ ಬೆದರಿಕೆ ಹಾಕುತ್ತಲೇ ಇದ್ದ.

ಈ ಬಾರಿ ಬೆದರಿಕೆ ಪತ್ರ ಬರುತ್ತಿದ್ದಂತೆ ಸಲ್ಮಾನ್‌ ಖಾನ್‌ ಅಲರ್ಟ್‌ ಆಗಿದ್ದಾರೆ. ಅವರು ಈಗಾಗಲೇ ಬುಲೆಟ್‌ ಪ್ರೂಫ್‌ ಕಾರನ್ನು ಕೂಡ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಸಲ್ಮಾನ್‌ ಖಾನ್‌ ತಮಗೆ ಶಸ್ತ್ರಾಸ್ತ್ರ ಪರವಾನಗಿ ಬೇಕು ಎಂದು ಕಳೆದ ತಿಂಗಳೇ ಮನವಿ ಮಾಡಿದ್ದರೂ ಈಗ ಸಿಕ್ಕಿದೆ. ಲೈಸೆನ್ಸ್‌ ಕೊಡಲು ಮಾಡಬೇಕಾದ ಪ್ರಕ್ರಿಯೆಗಳು, ವೆರಿಫಿಕೇಶನ್‌ಗಳೆಲ್ಲ ಈಗ ಮುಗಿದಿದ್ದು, ಇದೀಗ ಪರವಾನಗಿಯನ್ನು ಸಲ್ಮಾನ್‌ ಖಾನ್‌ ಮುಂಬೈ ಪೊಲೀಸ್‌ ಪ್ರಧಾನ ಕಚೇರಿಯ ಬಂದೂಕು ಪರವಾನಗಿ ಶಾಖೆಯಿಂದ ಸ್ವೀಕರಿಸಿದ್ದಾರೆ.

ಸದ್ಯ ಸಲ್ಮಾನ್‌ ಖಾನ್‌, ಕಭಿ ಈದ್‌, ಕಭಿ ದಿವಾಳಿ ಎಂಬ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾವನ್ನು ಫರ್ಹಾದ್‌ ಸಮಜಿ ನಿರ್ದೇಶನ ಮಾಡಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. 2023ರ ಏಪ್ರಿಲ್‌ 21ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಇದರಲ್ಲಿ ಶೆಹನಾಜ್‌ ಗುಲ್‌ ಮತ್ತು ಆಯುಷ್‌ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಕೃಷ್ಣ ಮೃಗ ಕೊಂದ ಸಲ್ಮಾನ್‌ ಖಾನ್‌ಗೆ ಕ್ಷಮೆ ಇಲ್ಲ ಎಂದ ಗ್ಯಾಂಗ್‌ಸ್ಟರ್‌ ಲಾರೆ‌ನ್ಸ್‌ ಬಿಷ್ಣೋಯಿ

Exit mobile version