Site icon Vistara News

Hassan Pen Drive Case: ಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ; ಕಿಡಿ ಕಾರಿದ ಬಹುಭಾಷಾ ನಟಿ ಪೂನಂ ಕೌರ್

Hassan Pen Drive Case

Hassan Pen Drive Case

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದೀಗ ಈ ಬಗ್ಗೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಪೂನಂ ಕೌರ್ (Poonam Kaur) ಪ್ರತಿಕ್ರಿಯಿಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ.

ʼʼಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ. 2,900ಕ್ಕೂ ಹೆಚ್ಚು ವಿಡಿಯೊಗಳನ್ನು ಮಾಡಿದ್ದಾರೆ ಎಂದರೆ ಅವರೆಷ್ಟು ವಿಕೃತ ಮನೋಭಾವ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಾಣಿಗಳು ಕೂಡ ರೀತಿ ಮಾಡೋದಿಲ್ಲʼʼ ಎಂದು ಹೇಳಿದ್ದಾರೆ. ʼʼಈ ರೀತಿಯ ಕೃತ್ಯ ಎಸಗಿದ ಪ್ರಜ್ವಲ್ ರೇವಣ್ಣ ಅವರನ್ನು ಬಿಡಬೇಡಿʼʼ ಎಂದು ಅವರು ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಪ್ರಜ್ವಲ್‌ ಬಳಿ ದುಡ್ಡು ಹಾಗೂ ಅಧಿಕಾರ ಇದೆ. ಹೀಗಾಗಿ ಅವರ ವಿರುದ್ಧ ಧ್ವನಿ ಎತ್ತಿದರೂ, ದೂರು ಕೊಟ್ಟರೂ ಶಿಕ್ಷೆಯಾಗುತ್ತದೆ ಎನ್ನುವ ಬಗ್ಗೆ ಗ್ಯಾರಂಟಿ ಇಲ್ಲʼʼ ಎಂದು ಪೂನಂ ಕೌರ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ʼʼಹೀಗಾಗಿ ನಾನು ಕೈ ಮುಗಿದು ಬೇಡಿಕೊಳ್ತಿನಿ. ಪ್ರಜ್ಚಲ್‌ಗೆ ಯಾರು ವೋಟ್ ಹಾಕಬೇಡಿ. ಅಂತಹವರು ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇರೋದಿಲ್ಲʼʼ ಎಂದು ಹೇಳಿದ್ದಾರೆ.

ʼʼಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಪ್ರತಿ ಮನೆಯ ಹೆಣ್ಣು ಮಗಳು ಎಚ್ಚರವಾದಾಗ ಮಾತ್ರ ದೇಶದ ಹೆಣ್ಣು ಮಕ್ಕಳು ಬಚವಾಗಲು ಸಾಧ್ಯ. ನಮ್ಮ ದೇಶ ರಾವಣ ರಾಜ್ಯದ ಕಡೆ ಹೋಗುತ್ತಿದೆಯಾ ಅಥವಾ ರಾಮರಾಜ್ಯದ ಕಡೆ ಹೋಗುತ್ತಿದೆಯಾ ?ʼʼ ಎಂದೂ ಅವರು ಪ್ರಶ್ನಿಸಿದ್ದಾರೆ.

ಪೂನಂ ಕೌರ್‌ ಹಿನ್ನೆಲೆ

ಪೂನಂ ಕೌರ್‌ ಪಂಜಾಬಿ ಕುಟುಂಬಕ್ಕೆ ಸೇರಿದ ಹೈದರಾಬಾದ್ ಹುಡುಗಿ. ತೇಜ ನಿರ್ದೇಶನದ ‘ಒಕ್ಕ ವಿಚಿತ್ರಂ’ ತೆಲುಗು ಚಿತ್ರದ ಮೂಲಕ 2006ರಲ್ಲಿ ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ಕನ್ನಡ, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದರು. 2008ರಲ್ಲಿ ತೆರೆಕಂಡ ಟಿ.ನಾಗಣ್ಣ ನಿರ್ದೇಶನದ, ಶಿವರಾಜಕುಮಾರ್ ಅಭಿನಯಿಸಿದ ‘ಬಂಧು-ಬಳಗ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ತಮ್ಮ 15 ವರ್ಷದ ಸಿನಿಕೆರಿಯರ್‌ನಲ್ಲಿ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ʼನಾತಿಚರಾಮಿʼ ತೆಲುಗು ಚಿತ್ರದ ಬಳಿಕ ಪೂನಂ ಬಣ್ಣ ಹಚ್ಚಿಲ್ಲ.

ಸ್ಫೋಟಕ ಹೇಳಿಕೆ ನೀಡಿದ ಮಾಜಿ ಕಾರು ಚಾಲಕ

ಈ ಮಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ವಿಡಿಯೊಗಳು ನನ್ನ ಬಳಿ ಇತ್ತು. ನಾನಿದನ್ನು ದೇವರಾಜೇಗೌಡ ಅವರಿಗೆ ಕೊಟ್ಟಿದ್ದೆ. ಅವರು ಇದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hassan Pen Drive Case: ಪ್ರಜ್ವಲ್‌ ರೇವಣ್ಣ ಕೇಸ್‌; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್‌ ಏನು?

ಕಾರ್ತಿಕ್ ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೊ ಮಾಡಿದ್ದು, ವಿಡಿಯೊ ಲೀಕ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸವನ್ನು ಬಿಟ್ಟಿದ್ದೇನೆ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದರು. ಹಿಂಸೆ ಕೊಟ್ಟರು. ಆದ್ದರಿಂದ ಅವರ ಮನೆಯಿಂದ ಹೊರಬಂದೆ. ಆ ಸಮಯದಲ್ಲಿ ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೊ ರಿಲೀಸ್ ಮಾಡಬಾರದು ಎಂದು ಅಂದು ನನ್ನ ವಿರುದ್ಧ ಪ್ರಜ್ವಲ್‌ ರೇವಣ್ಣ ಸ್ಟೇ ತಂದಿದ್ದರು. ನಿನ್ನ ಬಳಿ ಇರುವ ವಿಡಿಯೊ, ಫೋಟೊಗಳನ್ನು ಕೊಡು. ನಾನು ಯಾರಿಗೂ ತೋರಿಸುವುದಿಲ್ಲ ಎಂದು ದೇವರಾಜೇಗೌಡ ಕೇಳಿದ್ದರು. ಅವರನ್ನು ನಂಬಿ ನನ್ನ ಬಳಿಯಿದ್ದ ವಿಡಿಯೊದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಏನೋ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

Exit mobile version