Site icon Vistara News

Kaun Banega Crorepati: ಕೌನ್ ಬನೇಗಾ ಕರೋಡ್‌‌ಪತಿ ವಿಜೇತರು ತೆರಿಗೆ ಎಷ್ಟು ಕಟ್ಟಬೇಕು?

Kaun Banega Crorepati

ಜನಪ್ರಿಯ ಟಿವಿ ಷೋಗಳಲ್ಲಿ (most famous TV shows) ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ವಿಜೇತರಿಗೆ ಸಾವಿರದಿಂದ ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಹೀಗಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಕಠಿಣ ಸ್ಪರ್ಧೆಯನ್ನು ಎದುರಿಸಿ ಇದರಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಸಾಕಷ್ಟು ಪ್ರತಿಭಾವಂತರು ಇಲ್ಲಿ ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು (tax) ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಗೊಂದಲ ಹಲವರಲ್ಲಿ ಇದೆ.

Kaun Banega Crorepati


ಕೆಬಿಸಿ ಬಹುಮಾನದ ಮೊತ್ತಕ್ಕೆ ಎಷ್ಟು ತೆರಿಗೆ?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194ಬಿ ಪ್ರಕಾರ ರಿಯಾಲಿಟಿ ಟಿವಿ ಶೋಗಳು, ಲಾಟರಿ, ಸ್ಪರ್ಧೆ, ಕಾರ್ಡ್ ಆಟ ಇತ್ಯಾದಿಗಳಿಂದ ಯಾವುದೇ ರೀತಿಯ ಗಳಿಕೆಯು “ಇತರ ಮೂಲಗಳಿಂದ ಆದಾಯ” ದ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಬಹುಮಾನದ ಮೊತ್ತವು 10,000 ರೂ. ಮೀರಿದರೆ ಮೂಲದಲ್ಲಿ ಶೇ. 30ರಷ್ಟು ತೆರಿಗೆ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಬಹುಮಾನವನ್ನು ಹಸ್ತಾಂತರಿಸುವ ಮೊದಲು ಟಿಡಿಎಸ್ ಕಡಿತಗೊಳಿಸಲು ಅಧಿಕಾರಿಗಳು ಅಥವಾ ಬಹುಮಾನದ ಹಣವನ್ನು ವಿತರಿಸುವ ವ್ಯಕ್ತಿ ಜವಾಬ್ದಾರರಾಗಿರುತ್ತಾರೆ. ಇದಕ್ಕೆ ಸೆಕ್ಷನ್ 80ಸಿ ಅಥವಾ 80ಡಿ ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿಗಳನ್ನು ಪಡೆಯಲು ಸಾಧ್ಯವಿಲ್ಲ.

ಸೆಕ್ಷನ್ 194ಬಿ ನಿಯಮಗಳು ಏನು?

ಸೆಕ್ಷನ್ 194ಬಿ ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳು ನೆನಪಿನಲ್ಲಿರಲಿ. ಎಲ್ಲಾ ರೀತಿಯ ರಿಯಾಲಿಟಿ ಟಿವಿ ಶೋ, ಲಾಟರಿ ಇತ್ಯಾದಿಗಳಿಂದ ಬಹುಮಾನ ಗಳಿಕೆಗಳಿಗೆ ಇದು ಅನ್ವಯಿಸುತ್ತದೆ.

ಬಹುಮಾನದ ಹಣವನ್ನು ಕಂತುಗಳಲ್ಲಿ ಸ್ವೀಕರಿಸಿದರೆ ಪ್ರತಿ ಬಾರಿ ಪಾವತಿಯನ್ನು ಸ್ವೀಕರಿಸಿದಾಗ ಟಿಡಿಎಸ್ ಅನುಪಾತದ ದರದಲ್ಲಿ ತೆರಿಗೆಯನ್ನು ಅನ್ವಯಿಸಲಾಗುತ್ತದೆ.

ಮಾರಾಟವಾಗದ ಲಾಟರಿಯಲ್ಲಿರುವ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ಇದು ವ್ಯಾಪಾರ ಆದಾಯದ ಭಾಗವಾಗಿರುತ್ತದೆ.

ಬಹುಮಾನವು ಕೇವಲ ರಜೆ ಪ್ಯಾಕೇಜ್, ಕಾರು, ಇತ್ಯಾದಿಗಳಾಗಿದ್ದರೆ ವಿಜೇತರು ಅದನ್ನು ಸ್ವೀಕರಿಸುವ ಮೊದಲು ಟಿಡಿಎಸ್ ಪಾವತಿಸಬೇಕಾಗುತ್ತದೆ. ತೆರಿಗೆ ದರವು ಶೇ. 30 ಮತ್ತು ಮಾರುಕಟ್ಟೆ ಮೌಲ್ಯದ ಹೆಚ್ಚುವರಿ ಶುಲ್ಕವನ್ನು ಒಳಗೊಂಡಿರುತ್ತದೆ.

ಒಂದು ವೇಳೆ ನಗದು ಮತ್ತು ವಸ್ತು ರೂಪದ ಬಹುಮಾನವನ್ನು ಸ್ವೀಕರಿಸಿದರೆ ಎರಡರ ಜಂಟಿ ಮೌಲ್ಯದ ಮೇಲೆ ಟಿಡಿಎಸ್ ಅನ್ವಯಿಸುತ್ತದೆ. ಆದರೆ ಅದನ್ನು ನಗದು ಭಾಗದಿಂದ ಮಾತ್ರ ಕಡಿತಗೊಳಿಸಲಾಗುತ್ತದೆ.

ಬಹುಮಾನವು ಕೇವಲ ವಸ್ತುವಾಗಿದ್ದರೆ ಇದನ್ನು ವಿತರಿಸುವ ವ್ಯಕ್ತಿಯು ವಿಜೇತರಿಗೆ ಹಸ್ತಾಂತರಿಸುವ ಮೊದಲು ಎಲ್ಲಾ ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಒಂದು ವೇಳೆ ಬಹುಮಾನ ವಿಜೇತರ ಒಂದು ನಿರ್ದಿಷ್ಟ ಭಾಗವು ಸರ್ಕಾರ ಅಥವಾ ಲಾಟರಿ ಏಜೆನ್ಸಿಗೆ ಹೋದರೆ ಆ ಭಾಗವು ಟಿಡಿಎಸ್ ನಲ್ಲಿ ಬರುವುದಿಲ್ಲ.

ಇದನ್ನೂ ಓದಿ: Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

ಸೆಕ್ಷನ್ 194ಜಿ ಪ್ರಕಾರ ಲಾಟರಿ ಏಜೆಂಟ್‌ಗಳಿಗೆ ಕಮಿಷನ್‌ಗಳ ಪಾವತಿಯು ತೆರಿಗೆಗೆ ಒಳಪಡುತ್ತದೆ.

ಕೌನ್ ಬನೇಗಾ ಕರೋಡ್ ಪತಿಯಲ್ಲಿ ನಗದು ಬಹುಮಾನವನ್ನು ಗೆದ್ದ ಅನಂತರ ಶೇ. 30ರಷ್ಟು ಟಿಡಿಎಸ್ ಮತ್ತು ಶೇ. 4ರಷ್ಟು ಹೆಚ್ಚುವರಿ ಸೆಸ್ ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

Exit mobile version