ಬೆಂಗಳೂರು: ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ (Sangeeth Sivan dies) ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಂಗೀತ್ ಶಿವನ್ ಅವರಿಗೆ 61 ವರ್ಷ ವಯಸ್ಸಾಗಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಸಂಗೀತ್ ಶಿವನ್ ಮೂಲತಃ ಕೇರಳದ ತಿರುವನಂತಪುರಂನವರು. 1989 ರಲ್ಲಿ ಆಮೀರ್ ಖಾನ್ ಅಭಿನಯದ ರಾಖ್‌ಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು. ಮೋಹನ್ಲಾಲ್ ನಟನೆಯ ‘ಯೋಧ’ ಸಿನಿಮಾಗೆ ನಿರ್ದೇಶನ ಮಾಡಿ ಅವರು ಗುರುತಿಸಿಕೊಂಡರು.
ʻಜೋರ್ʼ, ʻಕ್ಯಾ ಕೂಲ್ ಹೈ ಹಮ್ʼ, ʻಅಪ್ನಾ ಸಪ್ನಾ ಮನಿ ಮನಿʼ ಮತ್ತು ʻಯಮ್ಲಾ ಪಗ್ಲಾ ದೀವಾನಾ 2ʼ ಮುಂತಾದ ಹಿಂದಿ ಚಲನಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಮಲಯಾಳಂನ ‘ರೋಮಾಂಚಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಅವರು ಮುಂದಾಗಿದ್ದರು. ಆ ಕೆಲಸ ಪೂರ್ಣಗೊಳ್ಳುವುದಕ್ಕೂ ಮೊದಲೇ ಅವರು ನಿಧನರಾಗಿರಾಗಿದ್ದಾರೆ.
ರಿತೇಶ್ ದೇಶ್‌ಮುಖ್ ಅವರು ಎಕ್ಸ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. “ಸಂಗೀತ್ ಶಿವನ್ ಸರ್ ಇನ್ನಿಲ್ಲ ಎಂದು ಗೊತ್ತಾದಾಗ ತೀವ್ರ ದುಃಖ ಮತ್ತು ಆಘಾತವಾಯಿತು.ಮೃದು ಮಾತು, ಸೌಮ್ಯ ಮತ್ತು ಅದ್ಭುತ ಮನುಷ್ಯ.ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ, ಪತ್ನಿ, ಮಕ್ಕಳು, ಸಹೋದರರಿಗೆ ನನ್ನ ಸಂತಾಪʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Do You Know: ನಿಮಗಿದು ಗೊತ್ತಾ? ಲವ್ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!
ಸುನೀಲ್ ಶೆಟ್ಟಿ, ರಿತೇಶ್ ದೇಶಮುಖ್, ಜಾಕಿ ಶ್ರಾಫ್, ಸೆಲಿನಾ ಜೇಟ್ಲಿ, ಚಂಕಿ ಪಾಂಡೆ, ರಾಜ್ಪಾಲ್ ಯಾದವ್, ತುಷಾರ್ ಕಪೂರ್, ಇಶಾ ಕೊಪ್ಪಿಕರ್, ನೇಹಾ ದೂಪಿಯಾ, ಅನುಪಮ್ ಖೇರ್ ಮುಂತಾದ ಸೆಲೆಬ್ರಿಟಿಗಳ ಜೊತೆ ಸಂಗೀತ್ ಶಿವನ್ ಕೆಲಸ ಮಾಡಿದ್ದರು.