ಇಸ್ಲಾಮಾಬಾದ್: ತೋಷಾಖಾನಾ (ಖಜಾನೆ) ಭ್ರಷ್ಟಾಚಾರ (Toshakhana Case) ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಮ್ರಾನ್ ಖಾನ್ ಅವರು 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸವಂತಿಲ್ಲ ಎಂದು ಪಾಕಿಸ್ತಾನ ಚುನಾವಣೆ ಆಯೋಗ (Election Commission of Pakistan) ಹೇಳಿದೆ. ಇಮ್ರಾನ್ ಖಾನ್ ಅವರು ಸಲ್ಲಿಸಿದ ನಾಮನಿರ್ದೇಶನಗಳನ್ನು ಪಾಕ್ ಚುನಾವಣೆ ಆಯೋಗವು ನಿರಾಕರಿಸಿದೆ.
“ಇಮ್ರಾನ್ ಖಾನ್ ಅವರು ಲಾಹೋರ್ ಹಾಗೂ ಮಿಯಾನ್‌ವಾಲಿ ಕ್ಷೇತ್ರಗಳಿಂದ ಸ್ಪರ್ಧಿಸಲು ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಇವರ ಉಮೇದುವಾರಿಕೆಯನ್ನು ಪಾಕಿಸ್ತಾನ ಚುನಾವಣೆ ಆಯೋಗದ ರಿಟರ್ನಿಂಗ್ ಅಧಿಕಾರಿಗಳು (ಚುನಾವಣೆ ಅಧಕಾರಿಗಳು) ನಿರಾಕರಿಸಿದ್ದಾರೆ” ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಇಮ್ರಾನ್ ಖಾನ್ ಅವರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ಪಿಟಿಐ ಪಕ್ಷವನ್ನು ಅಧಿಕಾರಕ್ಕೆ ತಂದು, ತಾವು ಪ್ರಧಾನಿಯಾಗುವ ಕನಸನ್ನು ಕೈಬಿಡಬೇಕಾಗಿದೆ. ತೋಷಾಖಾನಾ ಪ್ರಕರಣದಲ್ಲಿ ನ್ಯಾಯಾಲಯವು ಇಮ್ರಾನ್ ಖಾನ್ ಅವರಿಗೆ ಜಾಮೀನು ನೀಡಿದರೂ ಇದುವರೆಗೆ ಅವರನ್ನು ಬಿಡುಗಡೆ ಮಾಡಿಲ್ಲ.
Almost 90% of the nomination papers of PTI's important leaders including Imran Khan were rejected, 100% of the nomination papers of other parties were accepted.
— PTI (@PTIofficial) December 30, 2023
ROs, police, caretakers and ECP have played the role of facilitators for Nawaz Sharif in the first phase of elections…
ಉಮೇದುವಾರಿಕೆ ತಿರಸ್ಕರಿಸಲು ಕಾರಣವೇನು?
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ ಎದುರಿಸುತ್ತಿದ್ದು, ಅವರಿಗೆ ಇಸ್ಲಾಮಾಬಾದ್ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ಇಮ್ರಾನ್ ಖಾನ್ ಅವರ ಸಂಸದ ಸ್ಥಾನವು ರದ್ದಾಗಿದೆ. ಅಲ್ಲದೆ, ಈಗಾಗಲೇ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಇಮ್ರಾನ್ ಖಾನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಹಾಗಾಗಿ, ಚುನಾವಣೆ ಆಯೋಗವು ಅವರು ಸಲ್ಲಿಸಿದ ನಾಮನಿರ್ದೇಶನ ಪತ್ರಗಳನ್ನು ರಿಜೆಕ್ಟ್ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: World Cup : ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್ಗೆ ಹಾನಿ ಮಾಡುತ್ತಿದೆ ಎಂದು ದೂರಿದ ಇಮ್ರಾನ್ ಖಾನ್
ಏನದು ಭ್ರಷ್ಟಾಚಾರ ಪ್ರಕರಣ?
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಿತ್ತು. ತೋಷಾಖಾನಾ ಎಂಬುದು ಇಲಾಖೆಯಾಗಿದ್ದು, ಪ್ರಧಾನಿ ಸೇರಿ ರಾಜಕಾರಣಿಗಳಿಗೆ ನೀಡುವ ಉಡುಗೊರೆಗಳನ್ನು ಖಜಾನೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗೆಯೇ, ಪಾಕಿಸ್ತಾನದ 30 ಸಾವಿರ ರೂ.ವರೆಗಿನ ಮೌಲ್ಯದ ಉಡುಗೊರೆಗಳನ್ನು ಪ್ರಧಾನಿಯೇ ಇಟ್ಟುಕೊಳ್ಳಬಹುದಾಗಿದೆ. ಆದರೆ, ಇಮ್ರಾನ್ ಖಾನ್ ಅವರು ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಅಷ್ಟೇ ಅಲ್ಲ, ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದಾದ್ಯಂತ 37 ಪ್ರಕರಣಗಳು ದಾಖಲಾಗಿವೆ. ಇವುಗಳ ತನಿಖೆಯೂ ನಡೆಯುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ