ಹನೋಯಿ: ವಿಯೇಟ್ನಾಂ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಹಣಕಾಸು ವಂಚನೆ (Financial Fraud Case) ಪ್ರಕರಣ ಬಯಲಾಗಿದೆ. ಸುಮಾರು 12.5 ಶತಕೋಟಿ ಡಾಲರ್ (ಅಂದಾಜು 1.04 ಲಕ್ಷ ಕೋಟಿ ರೂ.) ವಂಚನೆ ಮಾಡಿದ ಪ್ರಕರಣದಲ್ಲಿ ಖ್ಯಾತ ಉದ್ಯಮಿ ಟ್ರುವೋಂಗ್ ಮೈ ಲ್ಯಾನ್ (Truong My Lan) ಅವರಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ದಕ್ಷಿಣ ವಿಯೇಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿರುವ ನ್ಯಾಯಾಲಯವು ಟ್ರುವೋಂಗ್ ಮೈ ಲ್ಯಾನ್ ಅವರ ವಿರುದ್ಧದ ಆರೋಪಗಳು ಸಾಬೀತಾದ ಕಾರಣ ಗಲ್ಲು ಶಿಕ್ಷೆ ವಿಧಿಸಿದೆ.
ವಿಯೇಟ್ನಾಂನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಟ್ರುವೋಂಗ್ ಮೈ ಲ್ಯಾನ್ ಅವರು ವ್ಯಾನ್ ಥಿನ್ಹ್ ಫಾಟ್ ಎಂಬ ಸಂಸ್ಥೆಯನ್ನು ಕಟ್ಟಿ ದೊಡ್ಡ ಸಾಮ್ರಾಜ್ಯದ ರಾಣಿ ಎನಿಸಿದ್ದರು. ಆದರೆ, ಇವರ ವಿರುದ್ಧ ಹಣದ ದುರ್ಬಳಕೆ, ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಸೇರಿ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇವರಿಂದ ವಿಯೇಟ್ನಾಂನ ಒಟ್ಟು ಜಿಡಿಪಿಯ ಶೇ.6ರಷ್ಟು ಅಂದರೆ, ಸುಮಾರು 1 ಲಕ್ಷ ಕೋಟಿ ರೂ. ವಂಚನೆ ಮಾಡಲಾಗಿದೆ ಎಂಬುದು ಈಗ ಸಾಬೀತಾಗಿದೆ. ಹಾಗಾಗಿ, ವಿಚಾರಣೆ ನಡೆಸಿದ ಹೋ ಚಿ ಮಿನ್ಹ್ ನ್ಯಾಯಾಲಯವು ಕೊನೆಗೆ ಗಲ್ಲು ಶಿಕ್ಷೆ ವಿಧಿಸಿದೆ.
Vietnam Real estate tycoon Truong My Lan sentenced to death by a court in Ho Chi Minh city in southern Vietnam in the country’s largest financial fraud case ever. pic.twitter.com/JzxNXt3eyv
— Cyprian, Is Nyakundi (@C_NyaKundiH) April 11, 2024
ಯಾವ ರೀತಿಯಲ್ಲಿ ವಂಚನೆ?
67 ವರ್ಷದ ಟ್ರುವೋಂಗ್ ಮೈ ಲ್ಯಾನ್ ಅವರು 2012ರಿಂದ 2022ರವರೆಗೆ ವಿಯೇಟ್ನಾಂನ ಸೈಗೋನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್‌ನ ಷೇರುಗಳ ಮೇಲೆ ಕಾನೂನುಬಾಹಿರವಾಗಿ ನಿಯಂತ್ರಣ ಸಾಧಿಸಿದ್ದರು. ಸರ್ಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಬ್ಯಾಂಕ್‌ನ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರುವೋಂಗ್ ಮೈ ಲ್ಯಾನ್ ಅವರಿಗೆ ಸಂಬಂಧಿಸಿದ ಒಂದು ಸಾವಿರಕ್ಕೂ ಅಧಿಕ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಲ್ಯಾನ್
ಟ್ರುವೋಂಗ್ ಮೈ ಲ್ಯಾನ್ ಅವರು ತಮ್ಮ ವಿರುದ್ಧ ಕೇಳಿಬಂದ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ನ್ಯಾಯಾಲಯದಲ್ಲಿ ತಮ್ಮ ಕೊನೆಯ ಹೇಳಿಕೆ ನೀಡಿದ್ದ ಅವರು “ನಾನು ತುಂಬ ಖಿನ್ನತೆಗೆ ಒಳಗಾಗಿದ್ದೇನೆ. ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ. ನಾನು ತುಂಬ ಅಮಾಯಕಳು. ಬ್ಯಾಂಕ್‌ನಲ್ಲಿ ಹೀಗೆಲ್ಲ ನಡೆಯುತ್ತದೆ, ಬ್ಯಾಂಕ್ ವ್ಯವಹಾರ ಹೇಗೆ ಎಂಬುದು ಕೂಡ ನನಗೆ ಗೊತ್ತಿಲ್ಲ. ನಾನು ಕಾನೂನುಬದ್ಧವಾಗಿಯೇ ಉದ್ಯಮ ನಡೆಸಿಕೊಂಡು ಬಂದವಳು” ಎಂದು ಹೇಳಿದ್ದರು.
ಇದನ್ನೂ ಓದಿ: FedEx Scam: ಬೆಂಗಳೂರು ವಕೀಲೆಗೆ 15 ಲಕ್ಷ ರೂ. ವಂಚನೆ; ವೆಬ್‌ಕ್ಯಾಮ್ ಎದುರು ಬೆತ್ತಲೆ ನಿಂತಿದ್ದೇಕೆ?