ಈಗಿನ ಕಾಲಘಟ್ಟದಲ್ಲಿ ಓದು ಮುಗಿಸಿ ಕೆಲಸ ಹಿಡಿಯುವುದು (Job hunt) ಅಂದರೆ ಅದೊಂದು ದೊಡ್ಡ ಕೆಲಸ. ಕೆಲಸಕ್ಕೆ ಸೇರುವುದು ಅಂದರೆ ಅದೊಂದು ಜೀವನದ ದೊಡ್ಡ ಮೈಲಿಗಲ್ಲು. ಒಮ್ಮೆ ಓದು ಮುಗಿಸಿ (education) ಕೆಲಸವೊಂದು ಪಕ್ಕಾ ಆದರೆ, ಹೆತ್ತವರಿಗೂ ನೆಮ್ಮದಿ. ತಮ್ಮ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವ ಹಂತಕ್ಕೆ ಬಂದರು ಎಂಬುದು ಅವರಿಗೆ ಸಂತೋಷದ ವಿಷಯ. ಆದರೆ ಪ್ರತಿವರ್ಷವೂ ನೂರಾರು ಕೋರ್ಸುಗಳನ್ನು ಮಾಡಿಕೊಂಡು ವಿದ್ಯಾಭ್ಯಾಸ ಮುಗಿಸುವ ಲಕ್ಷಗಟ್ಟಲೆ ಮಂದಿಗೆ ಕೆಲಸ ಅಷ್ಟು ಸುಲಭದಲ್ಲಿ ದಕ್ಕೀತೇ ಹೇಳಿ! ಅದೂ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ (competition) ಎಷ್ಟು ಅತ್ಯುತ್ತಮ ವಿದ್ಯೆ ಇದ್ದರೂ ಸಾಲದು, ಕೆಲಸ ಸಿಗುವುದು ಅಷ್ಟು ಸುಲಭವಲ್ಲ, ನಿಜ. ಓದು ಮುಗಿದ ತಕ್ಷಣ ಕೆಲಸ ಹಿಡಿದುಕೊಳ್ಳುವ ಧಾವಂತ, ಕಳವಳ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ, ಅದರಲ್ಲೂ, ಯಾವುದೇ ಅನುಭವ (experience) ಇಲ್ಲದೆ, ಕೆಲಸ ಹಿಡಿಯುವುದೆಂದರೆ ಅದೊಂದು ಸವಾಲಿನ ಕೆಲಸ. ಆದರೆ, ಇದು ಕಷ್ಟವೇನಲ್ಲ. ಕೆಲವು ತಯಾರಿಗಳನ್ನು ನೀವು ಮಾಡಿಕೊಂಡರೆ ಆತ್ಮವಿಶ್ವಾಸದಿಂದ (confidence) ಸಂದರ್ಶನಗಳನ್ನು (interview) ದಾಟಿ ಕೆಲಸ ಪಡೆಯಬಹುದು. ಹಾಗಾದರೆ ಬನ್ನಿ, ಯಾವ ಅನುಭವವೂ ಇಲ್ಲದಿದ್ದಾಗ ಕೆಲಸ ಹುಡುಕಿಕೊಳ್ಳುವ ಮೊದಲು ನೀವು ನಿಮ್ಮನ್ನು ಹೇಗೆ ತಯಾರಿ ಮಾಡಿಕೊಳ್ಳಬಹುದು (carrier tips) ಎಂಬುದನ್ನು ನೋಡೋಣ.
1. ನಿಮ್ಮ ಬಳಿ ಯಾವುದೇ ಅನುಭವ ಇಲ್ಲದಿದ್ದರೇನಂತೆ, ನೀವು ಪಡೆದುಕೊಂಡ ವೃತ್ತಿ ಕೌಶಲಗಳನ್ನು (job skills) ಅವರಿಗೆ ಕಾಣುವಂತೆ ಹೈಲೈಟ್ ಮಾಡಿ. ನಿಮ್ಮ ವಿದ್ಯಾರ್ಹತೆ ಇತ್ಯಾದಿಗಳ ಬಗೆಗೆಗಿನ ವಿವರಗಳಿರುವ ಅರ್ಜಿಯಲ್ಲಿ ಈ ಕೌಶಲಗಳ ವಿವರಗಳು ಎದ್ದು ಕಾಣುವಂತಿರಲಿ. ಈ ಕೌಶಲಗಳು ನೀವು ಹಾಜರಾದ ಈ ವೃತ್ತಿ ಸಂದರ್ಶನಕ್ಕೆ ಪೂರಕವಾಗಿರಲಿ.
2. ನಿಮ್ಮ ವಿದ್ಯಾಭ್ಯಾಸ, ಪೂರ್ವಾಪರದ ವಿವರಗಳಿರುವ ಅರ್ಜಿಯನ್ನು ಅತ್ಯಂತ ಸುಂದರವಾಗಿ ಬರೆಯಿರಿ. ಅನಗತ್ಯ ಮಾಹಿತಿಗಳನ್ನು ಕಿತ್ತು ಹಾಕಿ. ನಿಮ್ಮ ಕೌಶಲಗಳು, ನಿಮ್ಮ ಜನ್ಮದಿನಾಕ ವಿವರ, ವಿದ್ಯಾರ್ಹತೆ, ಪಡೆದ ಫಲಿತಾಂಶದ ವಿವರ, ಸಂಬಂಧಿಸಿದಂತೆ ಮಾಡಿರುವ ಕೋರ್ಸುಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದರ ವಿವರಗಳು, ಇಂಟರ್ನ್‌ಶಿಪ್ ಮಾಡಿದ್ದರೆ ಅದರ ವಿವರಗಳು ಇತ್ಯಾದಿಗಳನ್ನು ನಮೂದಿಸಿ. ಇಂಟರ್ನ್‌ಶಿಪ್ ವಿವರಗಳು, ವಿದ್ಯಾಭ್ಯಾಸದ ಜೊತೆಗೇನಾದರೂ ವಿಶೇಷ ಪ್ರಾಜೆಕ್ಟ್ ಮಾಡಿದರೆ ಅದರ ವಿವರಗಳು ಹಾಗೂ ನಿಮ್ಮ ವೃತ್ತಿ ಕೌಶಲಗಳನ್ನು ಹೈಲೈಟ್ ಮಾಡುವುದನ್ನು ಮರೆಯಬೇಡಿ.
3. ಕೆಲಸ ಸಿಗುತ್ತಿಲ್ಲ, ಕಷ್ಟವಾಗುತ್ತದೆ ಎಂದಾದಲ್ಲಿ ಅಥವಾ ಕೋರ್ಸು ಮುಗಿಯುತ್ತಿದ್ದಂತೆ, ಮುಗಿಯುವ ಮೊದಲೇ ಕನಿಷ್ಟ ಒಂದು ತಿಂಗಳ ಇಂಟರ್ನ್‌ಶಿಪ್ (internship) ಅಥವಾ ವಾಲಂಟೀರ್ ಅನುಭವ ಪಡೆದುಕೊಳ್ಳಿ. ಈ ಅನುಭವ ನಿಮಗೆ ಪ್ರಾಕ್ಟಿಕಲ್ ಅನುಭವ ನೀಡುವ ಜೊತೆಗೆ, ವೃತ್ತಿ ಆರಂಭಿಸುವ ಸಂದರ್ಶನಗಳಲ್ಲಿ ಇವು ನಿಮ್ಮ ಸಹಾಯಕ್ಕೆ ಬರುತ್ತವೆ.
4. ಕೆಲಸಕ್ಕಾಗಿ ಪ್ರಯತ್ನಿಸುವಾಗ ಕೆಲಸ ಸಿಗುತ್ತಿಲ್ಲ ಎಂದು ನಿತ್ಯವೂ ಸುಮ್ಮನೆ ಕೂರಬೇಡಿ. ನಿಮ್ಮ ಕೌಶಲಗಳನ್ನು ನೀವೇ ಪತ್ತೆ ಹಚ್ಚಿಕೊಂಡು ಪಾಕೆಟ್ ಮನಿಗಾಗಿ ಫ್ರೀಲ್ಯಾನ್ಸಿಂಗ್ ಕೂಡಾ ಮಾಡಬಹುದು. ಪಾರ್ಟ್‌ಟೈಂ ಕೆಲಸ ಎಲ್ಲಾದರೂ ಹುಡುಕಿಕೊಳ್ಳಬಹುದು. ಜೊತೆಗೆ ಸಂಬಂಧಿಸಿದ ಏನಾದರೊಂದು ಕೌಶಲ ವೃದ್ಧಿಗೆ ಕೋರ್ಸುಗಳನ್ನೂ ಮಾಡಬಹುದು.
5. ನೆಟ್‌ವರ್ಕಿಂಗ್ (networking) ಕೂಡಾ ನಿಮ್ಮನ್ನು ವೃತ್ತಿಯೆಡೆಗೆ ದಾರಿ ಮಾಡಿಕೊಡುವ ಇನ್ನೊಂದು ಮಂತ್ರ. ನಿಮ್ಮ ಓದಿನ ಸಂಬಂಧ ಇರುವ ಸೆಮಿನಾರುಗಳು, ವರ್ಕ್‌ಶಾಪ್‌ಗಳು, ಸಮಾರಂಭಗಳು ಇತ್ಯಾದಿಗಳಲ್ಲಿ ಭಾಗವಹಿಸಿ. ಜನರೊಂದಿಗೆ ಬೆರೆಯಿರಿ. ಪರಿಚಯ ಮಾಡಿಕೊಳ್ಳಿ, ವಿಚಾರ ವಿನಿಮಯಗಳಾಗಲಿ. ಲಿಂಕ್ಡ್ ಇನ್‌ನಂಥ ಜಾಲತಾಣಗಳೂ ಸೇರಿದಂತೆ ಇಂತಹ ನೆಟ್‌ವರ್ಕಿಂಗ್ ನಿಮ್ಮ ಕೆಲಸಕ್ಕೆ ಬಹಳ ಸಹಾಯ ಮಾಡುತ್ತದೆ.
6. ಎಂಟ್ರಿ ಲೆವೆಲ್ ಓಪನಿಂಗ್‌ಗಳನ್ನು ಹುಡುಕಿ ಅರ್ಜಿ ಹಾಕಿ. ಇಂತಹುಗಳಿಗೆ ಎಕ್ಸ್‌ಪೀರಿಯನ್ಸ್ ಬೇಕಾಗುವುದಿಲ್ಲ. ವಾಕ್‌ಇನ್ ಸಂದರ್ಶನಗಳೂ (walk in interviews) ಕೆಲವೊಮ್ಮೆ ನಿಮಗೆ ಅದೃಷ್ಟ ಹೊತ್ತು ತರಬಹುದು.
ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!
7. ಆತ್ಮವಿಶ್ವಾಸ ಬಹಳ ಮುಖ್ಯ. ಯಾವುದೇ ಸಂದರ್ಶನದಲ್ಲೂ, ನಿಮ್ಮ ಭಾಷಾಶುದ್ಧಿ ಹಾಗೂ ನೀವು ಹೇಗೆ ವಿಚಾರಗಳನ್ನು ಮಂಡಿಸುತ್ತೀರಿ, ನಿಮ್ಮ ಬಗ್ಗೆ ನೀವು ಎಷ್ಟು ಆತ್ಮವಿಶ್ವಾಸ ಪ್ರದರ್ಶಿಸುತ್ತೀರಿ ಎಂಬುದರ ಮೇಲೆ ಎಲ್ಲವೂ ನಿಂತಿದೆ ಎಂಬುದನ್ನು ಯಾವತ್ತೂ ಮರೆಯಬೇಡಿ. ಹಾಗಾಗಿ ನಿಮ್ಮ ಭಾಷಾಪ್ರೌಢಿಮೆ, ಮಾತುಗಾರಿಕೆಯನ್ನು ಉತ್ತಮಗೊಳಿಸಿಕೊಳ್ಳಿ.
8. ಅರ್ಜಿಯ ಜೊತೆಗೊಂದು ಚಂದನೆಯ ಕವರ್ ಲೆಟರ್ ಇರಲಿ. ನೀವು ಆ ಪತ್ರದಲ್ಲಿ ಯಾಕೆ ನೀವು ಆ ಕೆಲಸಕ್ಕೆ ಉತ್ತಮ ಆಯ್ಕೆ ಎಂಬುದನ್ನು ಆತ್ಮವಿಶಾಸದಿಂದ ಬರೆದುಕೊಳ್ಳಿ.
ನೆನಪಿಡಿ, ಕೆಲಸ ಹುಡುಕಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಆದರೆ, ಎಲ್ಲಿಂದಲಾದರೂ ಆರಂಭಿಸಲೇಬೇಕು ಅಲ್ಲವೇ? ಹಾಗಾಗಿ ಶ್ರದ್ಧೆ, ತಾಳ್ಮೆ, ಹಾಗೂ ಕಲಿಯುವ ಹುಮ್ಮಸ್ಸು, ಪಾಸಿಟಿವಿಟಿ, ಆತ್ಮವಿಶ್ವಾಸ ಇತ್ಯಾದಿಗಳಿದ್ದರೆ ಅದು ನಿಮ್ಮ ಈ ಮೆಟ್ಟಿಲಲ್ಲಿ ಜೊತೆಯಾಗುತ್ತದೆ.
ಇದನ್ನೂ ಓದಿ: Young at Heart: ವಯಸ್ಸಾಗಿದ್ದರೂ ನಿಮ್ಮಲ್ಲಿ ಈ ಗುಣಗಳಿದ್ದರೆ ನೀವು ‘ಯಂಗ್ ಅಟ್ ಹಾರ್ಟ್’!