ಬಾಗಲಕೋಟೆ: ಚಳಿ ಹಾಗೂ ಮಂಜು ಕವಿದ ವಾತಾವರಣ ಮತ್ತು ಬೆಳಗಿನ ಜಾವದ ನಿದ್ದೆಗಣ್ಣಿನ ಚಾಲನೆಗಳು ಭೀಕರ ರಸ್ತೆ ಅಪಘಾತಗಳಿಗೆ (Road Accident) ಕಾರಣವಾಗುತ್ತಿದೆ. ನಿನ್ನೆ ಚಳ್ಳಕೆರೆ ಬಳಿ ನಡೆದ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ್ದರೆ, ಇಂದು ಮುಂಜಾನೆ ಬಾಗಲಕೋಟೆಯ (bagalakote news) ಬೀಳಗಿಯಲ್ಲಿ ನಡೆದ ಅಪಘಾತದಲ್ಲಿ 4 ಮಂದಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಂಬರಮಟ್ಟಿ ಕ್ರಾಸ್ ಬಳಿ, ಹುಬ್ಬಳ್ಳಿ ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಘಟನೆ ನಡೆದಿದೆ. ನಿಂತಿದ್ದ ಕಬ್ಬು ತುಂಬಿದ ಟ್ರಾಕ್ಟರ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಗುದ್ದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬೆಳಗಿನ ಜಾವ 4 ಗಂಟೆಗೆ ಈ ಭೀಕರ ಅವಘಡ ನಡೆದಿದೆ. ಮೃತ ನಾಲ್ವರೂ ಮೃತರು ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮದವರು. ಮಲ್ಲು ಪೂಜಾರಿ (24), ಕಲ್ಲಪ್ಪ ಕೌಟಗಿ (34), ಕಾಮಾಕ್ಷಿ ಬಡಿಗೇರ (35), ತುಕಾರಾಮ್ ತಳೇವಾಡ (30), ಮೃತ ದುರ್ದೈವಿಗಳು. ಬಾದಾಮಿಯಿಂದ ಹೊನಗನಹಳ್ಳಿಗೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ. ಸ್ಥಳಕ್ಕೆ ಎಸ್ಪಿ ಅಮರನಾಥ್ ರೆಡ್ಡಿ ಹಾಗೂ ಬೀಳಗಿ ಪೋಲಿಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ನಿದ್ದೆಗಣ್ಣಿನಲ್ಲಿ ಅಪಘಾತ, ನಾಲ್ಕು ಬಲಿ
ಚಿತ್ರದುರ್ಗ: ಚಳ್ಳಕೆರೆ ಬಳಿ ನಡೆದ ಭೀಕರ ಅಪಘಾತದಲ್ಲಿ (Road Accident) ಮೂವರು ಮಕ್ಕಳು ಸೇರಿ ನಾಲ್ಕು ಮಂದಿ ದುರ್ಮರಣ ಹೊಂದಿದ್ದಾರೆ. ಚಿತ್ರದುರ್ಗ (chitradurga news) ಜಿಲ್ಲೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಎಂಬಲ್ಲಿ ಅಪಘಾತ ಸಂಭವಿಸಿದೆ.
ರಾಯಚೂರಿನ ದೇವದುರ್ಗ ತಾಲೂಕಿನ ದಂಡಮ್ಮಹಳ್ಳಿ ನಿವಾಸಿಗಳಾದ, ಒಂದೇ ಕುಟುಂಬದ ಆರು ಮಂದಿ ಕಾರಿನಲ್ಲಿ ಬೆಂಗಳೂರಿನ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಾಣಿಕೆರೆ ಬಳಿ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನುಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಮೃತಪಟ್ಟವರನ್ನು ಲಿಂಗಪ್ಪ (26), ಸಿಂಧು ಶ್ರೀ(2) ಅಯ್ಯಳಪ್ಪ (5 ತಿಂಗಳು), ರಕ್ಷಾ (3 ತಿಂಗಳು) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಬೀರ ಗಾಯಗಳಾಗಿದ್ದು, ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಲ್ಲಮ್ಮ (30), ಮಲ್ಲಮ್ಮ (20) ನಾಗಪ್ಪ (35) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರೆಲ್ಲ ಒಂದೇ ಕುಟುಂಬದವರು. ದೇವದುರ್ಗದಿಂದ ಬೆಂಗಳೂರಿಗೆ ತೆರಳುವಾಗ ಭೀಕರ ಅಪಘಾತ ಆಗಿದೆ. ಚಾಲಕನ ನಿದ್ರೆ ಮಂಪರಿನಲ್ಲಿ ನಸುಕಿನ ವೇಳೆ ನಡೆದಿರುವ ಘಟನೆ ಇದಾಗಿದೆ. ಸ್ಥಳಕ್ಕೆ ಪಿಎಸ್ಐ ಶಿವರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.