Site icon Vistara News

Murder Case: ಹೆಂಡತಿ ಜತೆ ಜಗಳದಲ್ಲಿ 4 ತಿಂಗಳ ಹಸುಳೆಯನ್ನು ನೆಲಕ್ಕಪ್ಪಳಿಸಿ ಕೊಂದ ಪೇದೆ!

murder case belagavi

ಬೆಳಗಾವಿ: ಹೆಂಡತಿ ಜತೆ ಜಗಳವಾಡಿ ಕೋಪದ ಭರದಲ್ಲಿ ತನ್ನದೇ ಮಗುವನ್ನು ನೆಲಕ್ಕಪ್ಪಳಿಸಿ ಕೊಂದುಹಾಕಿದ್ದಾನೆ (Murder Case) ಒಬ್ಬ ಕಿರಾತಕ ಪೊಲೀಸ್ ಕಾನ್‌ಸ್ಟೇಬಲ್. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿದೆ.

ಈ ಪೇದೆ ಕೊಂದ ಮಗುವಿಗಿನ್ನೂ ನಾಲ್ಕೇ ತಿಂಗಳು ಆಗಿತ್ತಷ್ಟೆ. ಕೃತ್ಯ ನಡೆಸಿದ ಕ್ರೂರಿ ಪೊಲೀಸ್ ಕಾನ್‌ಸ್ಟೇಬಲ್ ಹೆಸರು ಬಸಪ್ಪ ಬಾಳುಬಂಕಿ. ಬಸಪ್ಪ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೇಬಲ್ ಆಗಿದ್ದಾನೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತ ಮೂಲತಃ ಗೋಕಾಕ ತಾಲೂಕಿನ ದುರುದುಂಡಿ ಗ್ರಾಮದವನು.

ಬಸಪ್ಪ ಬಾಳುಬಂಕಿ ಚಿಂಚಲಿ ಗ್ರಾಮದ ಲಕ್ಷ್ಮೀ ಎಂಬವರನ್ನು ವಿವಾಹವಾಗಿದ್ದ. ಪತ್ನಿ ಲಕ್ಷ್ಮೀ ಹೆರಿಗೆಗಾಗಿ ತವರಿಗೆ ಬಂದಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೆ.18ರಂದು ಚಿಂಚುಲಿ ಗ್ರಾಮಕ್ಕೆ ಬಂದ ಬಸಪ್ಪ ಮಗುವನ್ನು ದುರದುಂಡಿಯ ಜಾತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ. ಇಷ್ಟು ಚಿಕ್ಕ ಮಗುವನ್ನು ಜಾತ್ರೆಗೆ ಕರೆದೊಯ್ಯುವುದು ಬೇಡವೆಂದು ಪತ್ನಿ ವಾದಿಸಿದ್ದಾಳೆ. ಆದರೂ ಕೇಳದೇ ಮಗುವನ್ನು ಬೈಕ್‌ನಲ್ಲಿ ಕರೆದೊಯ್ಯಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ನಾಲ್ಕು ತಿಂಗಳ ಮಗುವನ್ನು ಬೈಕ್‌ನಲ್ಲಿ ಕರೆದೊಯ್ಯುವುದು ಬೇಡ ಎಂದು
ತಡೆದಿದ್ದಾಳೆ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ಯುದ್ಧವಾಗಿದ್ದು, ಕೋಪದ ಭರದಲ್ಲಿ ಬಸಪ್ಪ ಮಗುವನ್ನು ಎತ್ತಿ ನೆಲಕ್ಕೆಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆಯ ಬಳಿಕ ಬಸಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಪತ್ನಿ ದೂರು ನೀಡಿದ್ದು, ಕುಡಚಿ ಪೊಲೀಸರು ಬಸಪ್ಪನನ್ನು ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ದೂರು ಕೂಡ ಈತನ ಮೇಲೆ ದಾಖಲಾಗಿದೆ.

ಇದನ್ನೂ ಓದಿ: Hit and Run: ಡಿಕ್ಕಿ ಹೊಡೆದು ಕಾರು ಪರಾರಿ, ಯುವಕ ಸ್ಥಳದಲ್ಲೇ ಸಾವು

Exit mobile version