ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಕುಯ್ದು ಭೀಕರವಾಗಿ ಕೊಂದು (Murder case) ಹಾಕಿದ್ದಾರೆ.
ನಗರದ ವಿವೇಕ್ ನಗರ ಈಸ್ಟ್ ರೋಡ್ ಬಳಿ ಘಟನೆ ನಡೆದಿದೆ. ಸುಮಾರು 45 ವರ್ಷ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಮಹಿಳೆಯ ವಿವರಗಳನ್ನು ಕಲೆ ಹಾಕಲಾಗುತ್ತಿದ್ದು, ಪರಿಚಿತರೇ ಕೊಂದು ಹಾಕಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಶೆಯಲ್ಲಿ ಪುಂಡಾಟ, ಕಾರುಗಳಿಗೆ ಜಖಂ
ಬೆಂಗಳೂರು: ಮಾದಕ ದ್ರವ್ಯದ ನಶೆಯಲ್ಲಿ ಪುಂಡಾಟ ನಡೆಸಿ ರಸ್ತೆ ಬದಿ ನಿಂತಿದ್ದ ಕಾರುಗಳನ್ನು ಜಖಂಗೊಳಿಸಿದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ತದುಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯತ್ರಿನಗರ ಮೊದಲನೇ ಮುಖ್ಯ ರಸ್ತೆಯಲ್ಲಿ ನಡೆದ ಘಟನೆಯಿದು.
ಮದ್ಯದ ನಶೆಯಲ್ಲಿ ಈ ಹುಚ್ಚಾಟ ನಡೆಸಿದ್ದಾರೆ ಎನ್ನಲಾಗಿದ್ದು, ರಾತ್ರಿಯಾದರೆ ಜಾಲಿ ರೈಡ್‌ಗಾಗಿ ಹೊರಬೀಳುವ ಈ ನಿಶಾಚರಿ ದುಷ್ಕರ್ಮಿಗಳು ನಿವಾಸಿಗಳ ನೆಮ್ಮದಿಗೆ ಕೊಳ್ಳಿ ಇಟ್ಟು ಹೈರಾಣಾಗಿಸುತ್ತಿರುವುದಂತೂ ಸತ್ಯ. ಹಾಗೇ ಚಂದ್ರು ನಾಯ್ಡು@ ಸೇಟು ಎಂಬ ಕಾರು ಚಾಲಕ ತನ್ನಿಬ್ಬರು ಸ್ನೇಹಿತರ ಜತೆ ಸೇರಿ ಹೀಗೆ ಅವಾಂತರ ಸೃಷ್ಟಿಸಿದ್ದಾನೆ.
ಹಿಂದೆ ಇದೇ ಏರಿಯಾದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಶಿಫ್ಟ್ ಆಗಿದ್ದ. ಇಂದು ತನ್ನ ಗೆಳೆಯರ ಜೊತೆಗೂಡಿ ಮದ್ಯ ಸೇವಿಸಿ ಐ20 ಕಾರು ಚಲಾಯಿಸಿಕೊಂಡು ಬಂದು ಏರಿಯಾದಲ್ಲಿದ್ದ 12ಕ್ಕೂ ಅಧಿಕ ಕಾರ್, 10ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದಿದ್ದಾನೆ. ರಸ್ತೆ ಬದಿ ನಿಂತಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ಇವರು ಜಖಂ ಮಾಡಿದ್ದಾರೆ. ಈ ಯುವಕರ ಪುಂಡಾಟ ಹೆಚ್ಚಾದಾಗ ಸ್ಥಳೀಯರೇ ಗಾಡಿಯನ್ನು ಚೇಸ್ ಮಾಡಿ ಹಿಡಿದು ಇಬ್ಬರು ಯುವಕರಿಗೂ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ತವ್ಯಲೋಪ ಆರೋಪ, ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತು
ಬೆಂಗಳೂರು: ಕರ್ತವ್ಯಲೋಪ ಆರೋಪದಡಿ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ಎಫ್. ತೋಟಗಿ ಎಂಬವರನ್ನು ಅಮಾನತು ಮಾಡಲಾಗಿದೆ.
ಇತ್ತೀಚೆಗೆ ಹೊಟೇಲ್, ಬಾರ್, ಪಬ್‌ಗಳ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಬಾರ್‌ಗಳಲ್ಲಿ ಹೊರ ರಾಜ್ಯದ ಹುಡುಗಿಯರನ್ನು ಬಳಸಿಕೊಂಡು ಲೈಂಗಿಕ ಪ್ರಚೋದನೆ ನೀಡಲಾಗುತ್ತಿತ್ತು. ಈ ಸಂಬಂಧ ಮೂರು ಜನರನ್ನು ಸಿಸಿಬಿ ಬಂಧಿಸಿತ್ತು. ಅವಧಿ ಮೀರಿ ಬಾರ್ ಕಾರ್ಯ ನಿರ್ವಹಿಸಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪ ಹಿನ್ನೆಲೆಯಲ್ಲಿ ಅಶೋಕನಗರ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ದಯಾನಂದ್ ಆದೇಶ ನೀಡಿದ್ದಾರೆ.
ಇದನ್ನೂ ಓದಿ: Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!