ಬೆಂಗಳೂರು: ಡಿಸೆಂಬರ್ 31ರಂದು ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ (New Year Celebration) ಮಂದಿಗೆ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಸಹಕಾರ ನೀಡಲು ಮುಂದಾಗಿದೆ. ಬೆಂಗಳೂರಿನ ಎಂ.ಜಿ. ರೋಡ್ (MG Road Station), ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಗಳಲ್ಲಿ ಪ್ರಮುಖವಾಗಿ ಸಂಭ್ರಮಾಚರಣೆ ಮುಗಿಲು ಮುಟ್ಟುತ್ತದೆ. ಇಲ್ಲಿಗೆ ಬಂದವರು ತಮ್ಮ ಮನೆ ಸೇರಲು ಅನುಕೂಲವಾಗುವಂತೆ ಅಂದು ಮೆಟ್ರೋ ಸಂಚಾರವನ್ನು ರಾತ್ರಿ 2 ಗಂಟೆಯವರೆಗೂ ವಿಸ್ತರಿಸಲಾಗಿದೆ. ಆದರೆ, ಸಂಭ್ರಮಾಚರಣೆಯ ಉತ್ತುಂಗ ಸ್ಥಿತಿ ಇರುವ ಎಂ.ಜಿ ರೋಡ್‌ನಲ್ಲಿರುವ ಮೆಟ್ರೋ ಸ್ಟೇಷನ್ ಅನ್ನು ಹೆಚ್ಚುವರಿ ಅವಧಿಯಲ್ಲಿ (Metro operation extra time) ತೆರೆಯದಂತೆ ಪೊಲೀಸ್ ಇಲಾಖೆ (Police Department) ಆದೇಶ ನೀಡಿದೆ.
ಪ್ರತಿ ದಿನ ರಾತ್ರಿ 11:30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿಸೆಂಬರ್ 31ರಂದು ರಾತ್ರಿ 2 ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ. ಈ ಸಮಯದಲ್ಲಿ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಹೆಚ್ಚುವರಿ ಅವಧಿಯಲ್ಲಿ ಎಂ.ಜಿ.ರಸ್ತೆ ನಿಲ್ದಾಣ ಬಂದ್ ಇರುವುದರಿಂದ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ತೆರಳಿ ಸಂಚಾರ ಮಾಡಬಹುದಾಗಿದೆ.
ಇದನ್ನೂ ಓದಿ: New Year Celebration : ಡಿ. 31ರ ರಾತ್ರಿ ರಿವಾಲ್ವರ್ ಹಿಡ್ಕೊಂಡೇ ತಿರುಗಿ; ಪೊಲೀಸರಿಗೆ ಆರ್ಡರ್
ಎಂ.ಜಿ. ರೋಡ್ ಮೆಟ್ರೋ ಸ್ಟೇಷನ್ ಬಂದ್‌ಗೆ ಕಾರಣ
1. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಂದರ್ಭದಲ್ಲಿ ಎಂ.ಜಿ.ರಸ್ತೆಗೆ ಹೊಂದಿಕಂಡಿರುವ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಪಕ್ಕದಲ್ಲೇ ಇರುವ ಮೆಟ್ರೋ ನಿಲ್ದಾಣದಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟ ಆಗುತ್ತದೆ.
2. ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಸುತ್ತಮುತ್ತಲೇ ಹೊಸ ವರ್ಷ ಸಂಭ್ರಮಾಚರಣೆಗಳು ಜೋರಾಗಿಯೇ ನಡೆಯುತ್ತವೆ. ಹೆಚ್ಚು ಜನದಟ್ಟಣೆ ಇರುತ್ತದೆ. ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯ ಆಗುವುದಿಲ್ಲ.
3. ಕಳೆದ ವರ್ಷ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆ ಮುಗಿದ ಬಳಿಕ ಏಕಾಏಕಿ ಇಲ್ಲಿನ ಮೆಟ್ರೋ ನಿಲ್ದಾಣದಲ್ಲಿ ಭಾರೀ ದಟ್ಟಣೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಗಲಾಟೆಗಳು, ತಿಕ್ಕಾಟದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಹಲವರಿಗೆ ಸಮಸ್ಯೆ ಉಂಟಾಗಿತ್ತು.
ಮಧ್ಯರಾತ್ರಿ ಟಿಕೆಟ್ ಕೊಡುವುದಿಲ್ಲ.. ಮೊದಲೇ ತೆಗೆದುಕೊಳ್ಳಬಹುದು!
1.ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ 50 ರೂಪಾಯಿ ಮತ್ತು ಕಾಗದದ ಟಿಕೆಟ್ ವಿತರಣೆ ಮಾಡಲಾಗುವುದು. ಇದು ಯಾವುದೇ ಭಾಗಕ್ಕೂ ಸಿಂಗಲ್ ಟಿಕೆಟ್ ಆಗಿರುತ್ತದೆ.
2. ಕಾಗದದ ಟಿಕೆಟ್‌ಗಳನ್ನು ಅಂದು ಮುಂಚಿತವಾಗಿಯೇ ಪಡೆಯಬೇಕು. ಮಧ್ಯರಾತ್ರಿ ಟಿಕೆಟ್ ವಿತರಣೆ ಇರುವುದಿಲ್ಲ.
3. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು.