ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ (ಅ.ಭಾ.ಸಾ.ಪ-ABSP Karnataka) 2023ನೇ ಸಾಲಿನ ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಕೌಜಲಗಿಯ ಡಾ.ಸುಮಾ ಶಿವಾನಂದ ದೇಸಾಯಿ ಅವರು ಆಯ್ಕೆಯಾಗಿದ್ದಾರೆ. ಇವರಿಗೆ ಡಿಸೆಂಬರ್ 3 ರಂದು ಬೆಳಗ್ಗೆ 10.30ಕ್ಕೆ ಬಾಗಲಕೋಟೆಯ ಬ.ವಿ.ವಿ. ಸಂಘದ ಪಾಲಿಟೆಕ್ನಿಕ್ ಸೆಮಿನಾರ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಶಾರದಾಮೂರ್ತಿಯನ್ನು ಒಳಗೊಂಡಿರುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ.ಭಾ.ಸಾ.ಪ ರಾಜ್ಯ ಉಪಾಧ್ಯಕ್ಷ ಎಸ್.ಜಿ.ಕೋಟಿ ವಹಿಸಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ಎಸ್.ಕೆ.ಎಸ್. ಪಾಠಶಾಲೆ ಮುಖ್ಯಾಧ್ಯಾಪಕ ಚಿದಾನಂದ ಸ್ವಾಮಿ ಹಿರೇಮಠ ಮಾತನಾಡಲಿದ್ದು, ಅ.ಭಾ.ಸಾ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಪ್ರಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅ.ಭಾ.ಸಾ.ಪ ಜಿಲ್ಲಾಧ್ಯಕ್ಷ, ಪ್ರಾಚಾರ್ಯ ಜಿ.ಬಿ.ದಾನ ಶೆಟ್ಟಿ, ಡಾ.ಎಂ.ಎ. ಪಾಟೋಳಿ ಶಿವಾನಂದ ದೇಸಾಯಿ ಉಪಸ್ಥಿತರಿರುತ್ತಾರೆ ಎಂದು ಅ.ಭಾ.ಸಾ.ಪ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಹಾಗೂ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ತಿಳಿಸಿದ್ದಾರೆ.
ಇದನ್ನೂ ಓದಿ | RK Balachandra: ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿಗೆ ಕುಶಾಲನಗರದ ಆರ್.ಕೆ. ಬಾಲಚಂದ್ರ ಆಯ್ಕೆ
ಪ್ರಶಸ್ತಿ ಪುರಸ್ಕೃತರ ಪರಿಚಯ
1960ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಜನಿಸಿದ ಡಾ. ಸುಮಾ ದೇಸಾಯಿಯವರು ವಿವಾಹವಾದ ನಂತರ ಗುಜರಾತಿನ ವಡೋದರಾದಲ್ಲಿ ನೆಲೆಸಿ ಪ್ರಾಧ್ಯಾಪಕಿಯಾಗಿ, ಸಂಶೋಧಕರಾಗಿ ಸಂಸ್ಕೃತ ಭಾಷೆಯಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆದರು. ಸಂಸ್ಕೃತ ಭಾರತೀದಲ್ಲಿ ಕಾರ್ಯನಿರ್ವಹಿತ್ತಾ ಅನೇಕ ರಾಷ್ಟ್ರೀಯ ಸಂಸ್ಕೃತ ಸೆಮಿನಾರ್‌ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸ್ಕೃತ ಸಂಭಾಷಣಾ ಶಿಬಿರ, ಆನ್ ಲೈನ್ ಪಾಠಗಳನ್ನು ನಡೆಸುತ್ತಿರುವ ಡಾ.ಸುಮಾ ದೇಸಾಯಿ ಅವರು ಈಗ ಕೌಜಲಗಿಯ ಬನಶಂಕರಿ ಗೋ ಸಂವರ್ಧನ ಕೇಂದ್ರದಲ್ಲಿ ಪತಿ ಶಿವಾನಂದ ದೇಸಾಯಿಯವರ ಜತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ