Site icon Vistara News

Budget 2024: ಪ್ರಗತಿನಿಷ್ಠ ಬಜೆಟ್’ ಎಂದ ಬಿಎಸ್‌ವೈ; ನಾಮಫಲಕವನ್ನು ಮಾತ್ರ ಬದಲಾಗಿದೆ ಎಂದ ಡಿ.ಕೆ. ಸುರೇಶ್

BS Yediyurappa and DK Suresh

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ (Budget 2024) ಅನ್ನು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಸ್ವಾಗತಿಸಿದ್ದು, ಇದು ರಾಷ್ಟ್ರದ ‘ಪ್ರಗತಿನಿಷ್ಠ ಬಜೆಟ್’ ಎಂದು ಬಣ್ಣಿಸಿದ್ದಾರೆ. ಇನ್ನು ಸಂಸದ ಡಿ.ಕೆ. ಸುರೇಶ್ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿ, ಈ ಬಜೆಟ್‌ನಲ್ಲಿ ನಾಮಫಲಕವನ್ನು ಮಾತ್ರ ಬದಲಾಯಿಸಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ‌

ಬಿ.ಎಸ್.‌ ಯಡಿಯೂರಪ್ಪ ಟ್ವೀಟ್‌ನಲ್ಲೇನಿದೆ?

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, “ಪ್ರಧಾನಿ ನರೇಂದ್ರ ಮೋದಿ ಅವರ ನವಭಾರತದ ಪರಿಕಲ್ಪನೆಯ ಸಾಕಾರದ ನಿಟ್ಟಿನಲ್ಲಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ ‘ಪ್ರಗತಿನಿಷ್ಠ ಬಜೆಟ್’ ಮಂಡಿಸಿರುವ ವಿತ್ತ ಸಚಿವೆ ಶ್ರೀಮತಿ @nsitharaman ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಚುನಾವಣಾಪೂರ್ವ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸದೆ, ಈ ಮಧ್ಯಂತರ ಬಜೆಟ್ ಮೂಲಕ ನಮ್ಮ ಯುವಜನತೆ, ರೈತರು, ಮಹಿಳೆಯರು ಹಾಗೂ ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವಿಕ ಆಯವ್ಯಯವನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸದೃಢ, ಸಶಕ್ತ, ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ನಿಟ್ಟಿನಲ್ಲಿ ಎನ್.ಡಿ.ಎ ಸರ್ಕಾರದ ಬದ್ಧತೆಯನ್ನು ಈ ಬಜೆಟ್ ಪುನರುಚ್ಚರಿಸಿದ್ದು, ದೇಶದ ಪ್ರಗತಿಗೆ ಪೂರಕವಾಗಿರುವ ಈ ಬಜೆಟ್ ಅನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ನಾಮಫಲಕ ಮಾತ್ರ ಬದಲಾಯಿಸಲಾಗಿದೆ: ಡಿ.ಕೆ. ಸುರೇಶ್

ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ‌ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್‌ನಲ್ಲಿ ನಾಮಫಲಕವನ್ನು ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನು ಇಡಲಾಗಿದೆ. ಎಕನಾಮಿಕ್ ಸರ್ವೆಯವರು ಮುಂದಿಟ್ಟಿದ್ದಿದ್ದರೆ ಇವರ ಪರಿಸ್ಥಿತಿ ಏನಿದೆ? ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಎಂಬುದು ತಿಳಿಯುತ್ತಿತ್ತು. ಈಗ ದೇಶದ ಸ್ಥಿತಿ ಬಗ್ಗೆ ಅನುಮಾನಗಳು ಪ್ರಾರಂಭವಾಗಿದೆ.

ಈ ಬಜೆಟ್ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳನ್ನು ನೀಡಿದೆ. ಆದರೆ, ಹೇಳಿಕೆಗಳಿಂದ ಕೂಡಿದ ಬಜೆಟ್‌ ಇದಾಗಿದೆ ಎಂದು ಹೇಳಬಹುದಾಗಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇವತ್ತು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂಥವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಡಿ.ಕೆ. ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:Budget 2024: ಆರ್ಥಿಕತೆಗೆ ಬೂಸ್ಟ್‌ ನೀಡಿದ ಮೋದಿ;‌ ಗಂಡನ ಹಣ ಕಿತ್ತು ಹೆಂಡ್ತಿಗೆ ಕೊಡ್ತಾರಾ ಸಿದ್ದರಾಮಯ್ಯ ಎಂದ ಬಿಜೆಪಿ!

ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಡಿಕೆ ಸುರೇಶ್

ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್‌ ಎಚ್ಚರಿಕೆ ನೀಡಿದ್ದಾರೆ.

Exit mobile version