ಹಾವೇರಿ : ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲ ಎಂದು ಮಾವನ ಮೇಲೆ ಸಿಟ್ಟಾದ ಅಳಿಯನೊಬ್ಬ, ಅಡಕೆ ತೋಟ ನಾಶಪಡಿಸಿದ್ದಾನೆ. ಮಾವ ಬೆಳೆಸಿದ್ದ 106 ಅಡಿಕೆ ಗಿಡಗಳನ್ನು ಕಡಿದು ಸಿಟ್ಟು (Assault Case) ಹೊರಹಾಕಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರಗೆ ಸೇರಿದ ಅಡಿಕೆ ತೋಟವನ್ನು ಅಳಿಯ ಬಸವರಾಜ್ ಎಂಬಾತ ಅಡಿಕೆ ಬೆಳೆ ನಾಶ ಮಾಡಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಬಸವರಾಜ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಪತ್ನಿ ಜತೆಗೆ ನಿತ್ಯವು ಜಗಳವಾಡುತ್ತಿದ್ದ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ತವರು ಮನೆ ಸೇರಿದ್ದಳು. ಮೂರು ತಿಂಗಳಿನಿಂದ ಪತ್ನಿ ತವರು ಮನೆಯಲ್ಲಿ ಇದ್ದಿದ್ದಕ್ಕೆ ಸಿಟ್ಟಾದ ಬಸವರಾಜ್, ಅಡಿಕೆ ತೋಟವನ್ನು ನಾಶ ಮಾಡಿದ್ದಾನೆ. ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಕೆ ಗಿಡಗಳು ಬಲಿಯಾಗಿವೆ.
ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ
ಬೆಳಗಾವಿ: ಕಂಠ ಪೂರ್ತಿ ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ ಬಿದ್ದಿದೆ. ನಡುಬೀದಿಯಲ್ಲೇ ಕುಡುಕ ಅಳಿಯನ ಹಿಡಿದು ಅತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಹೋಗಲು ಪತ್ನಿ, ಅತ್ತೆ ಹರಸಾಹಸ ಪಡುತ್ತಿದ್ದರು. ಮನೆಗೆ ಬರಲು ಹಿಂದೇಟ್ಟು ಹಾಕುತ್ತಿದ್ದ ಕುಡುಕ ಅಳಿಯನಿಗೆ ಕಪಾಳಮೋಕ್ಷ ಮಾಡಿ ಹಿಗ್ಗಾಮುಗ್ಗಾ ಥಳಿಸಿದರು. ಕುಡುಕನ ಅವಾಂತರಕ್ಕೆ ಸ್ಥಳೀಯರು ಹೈರಾಣಾದರು. ಜತೆಗೆ ಅಲ್ಲಿದ್ದವರೇ ವಿಡಿಯೊ ಮಾಡಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ