2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ (Karnataka Budget 2023 Live Updates) ಇಂದು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಸಲದ ಕೊನೇ ಬಜೆಟ್ ಇದು. 2023ರ ಮೇ ತಿಂಗಳ ಒಳಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬೊಮ್ಮಾಯಿ ಅವರು ಮಂಡಿಸಲಿರುವ ‘ಚುನಾವಣಾ ವರ್ಷದ ಬಜೆಟ್’ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಿದ್ದು, ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ 1800 ಕೋಟಿ ರೂಪಾಯಿ ಸಹಾಯಧನ. ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್ಪಾಸ್ ಸೌಲಭ್ಯ. ಇದಕ್ಕಾಗಿ 1000 ಕೋಟಿ ರೂಪಾಯಿ ಮೀಸಲು. ರಾಜ್ಯದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ವಿದ್ಯಾವಾಹಿನಿ ಯೋಜನೆಯಡಿ 350 ಕೋಟಿ ರೂ.ವೆಚ್ಚದಲ್ಲಿ ಉಚಿತ ಬಸ್ಪಾಸ್
ಉತ್ತರ ಕನ್ನಡಕ್ಕೆ ಸೂಪರ್ಸ್ಪೆಶಾಲಿಟಿ ಆಸ್ಪತ್ರೆ
ಉತ್ತರ ಕನ್ನಡದ ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಮತ್ತು ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಣೆ ಮಾಡಿದರು. ಮೈಸೂರು, ಶಿವಮೊಗ್ಗಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ.
ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ
ಆರೋಗ್ಯ ಸೇವೆಗಳನ್ನು ತಳಹಂತದಿಂದ ಬಲಪಡಿಸಲು 100 ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿ. ಮೆದುಳು ಆರೋಗ್ಯ ಯೋಜನೆ ರಾಜ್ಯಾದ್ಯಂತ ವಿಸ್ತರಿಸಲು 25 ಕೋಟಿ ರೂಪಾಯಿ.
ಮೀನುಗಾರರಿಗೆ ಬಂಪರ್ ಉಡುಗೊರೆ
ಮೀನುಗಾರಿಕೆ ಕ್ಷೇತ್ರವನ್ನು ಸದೃಢಗೊಳಿಸಲು ಈ ಸಲ ಬಜೆಟ್ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಮೀನುಗಾರರಿಗೆ ನೆರವಾಗಲು 62 ಎಫ್ಎಫ್ಪಿಒಗಳ ಸ್ಥಾಪನೆ ಮಾಡಲಾಗಿದ್ದು, 12,175 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ. ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು ಪ್ರೋತ್ಸಾಹಕ್ಕೆ 20 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಮತ್ತು ಹಾವೇರಿ ಜಿಲ್ಲೆಯಲ್ಲಿ ನೂತನ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ. 10 ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆ ಕಟ್ಟಿಸಿಕೊಡಲು ತೀರ್ಮಾನ. ಎಲ್ಲ ಸೀಮೆ ಎಣ್ಣೆ ಚಾಲಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅಳವಡಿಸಲು ತಲಾ 50 ಸಾವಿರ ರೂ.ಸಹಾಯ ಧನ.
ಈ ಸಲದ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ?
ಶಿಕ್ಷಣ ಕ್ಷೇತ್ರ: 37,960 ಕೋಟಿ ರೂಪಾಯಿ ಹಂಚಿಕೆ. ಕಳೆದ ವರ್ಷಕ್ಕಿಂತ ಶೇ.12 ಹೆಚ್ಚಳ
ಜಲಸಂಪನ್ಮೂಲ: 22,854 ಕೋಟಿ ರೂ.; ಶೇ.7ರಷ್ಟು ಏರಿಕೆ
ಗ್ರಾಮೀಣ ಅಭಿವೃದ್ಧಿ – 20, 449 ಕೋಟಿ ರೂ.; ಶೇ.6ರಷ್ಟು ಹೆಚ್ಚಳ
ನಗರಾಭಿವೃದ್ಧಿ – 17,938 ಕೋಟಿ ರೂ. – ಶೇ.6
ಕಂದಾಯ – 15,943 ಕೋಟಿ ರೂ.; ಶೇ.5
ಆರೋಗ್ಯ ಕುಟುಂಬ ಕಲ್ಯಾಣ – 15,151 ಕೋಟಿ ರೂ.; ಶೇ.5
ಒಳಾಡಳಿತ ಮತ್ತು ಸಾರಿಗೆ – 14,509; ಕಳೆದ ವರ್ಷಕ್ಕಿಂತ ಶೇ.5ರಷ್ಟು ಏರಿಕೆ
ಇಂಧನ- 13,803 ಕೋಟಿ ರೂ.; ಶೇಕಡಾ 4 ಏರಿಕೆ
ಸಾಮಾಜ ಕಲ್ಯಾಣ – 11, 163 ಕೋಟಿ ರೂಪಾಯಿ.; ಶೇ.4 ಏರಿಕೆ
ಲೋಕೋಪಯೋಗಿ – 10, 741 ಕೋಟಿ ರೂ.; ಶೇ.4 ಏರಿಕೆ.
ಕೃಷಿ ತೋಟಗಾರಿಕೆ – 9,456 ಕೋಟಿ ರೂ.; ಶೇ. 3 ಹೆಚ್ಚಳ
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,676 ಕೋಟಿ ರೂ.- ಶೇ.2ರಷ್ಟು ಏರಿಕೆ
ಆಹಾರ ಮತ್ತು ನಾಗರಿಕ ಸರಬರಾಜು – 4, 600 ಕೋಟಿ ರೂಪಾಯಿ-ಶೇ. 1 ಹೆಚ್ಚಳ
ವಸತಿ – 3,787 ಕೋಟಿ ರೂ.-1% ಏರಿಕೆ
ಇತರೆ 1,16,968 ಕೋಟಿ ರೂಪಾಯಿ; 36% ಹೆಚ್ಚಳ