ಕರ್ನಾಟಕ ವಿಧಾನಸಭೆ ಚುನಾವಣೆ (karnataka election 2023) ಗರಿಗೆದರಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣ ಸುದ್ದಿಗೆ (Karnataka Election Live Updates) ವಿಸ್ತಾರ ನ್ಯೂಸ್ ಲೈವ್ ಅಪ್‌ಡೇಟ್ ನೋಡ್ತಾ ಇರಿ.
ಬಿಜೆಪಿಗೆ ಆಯನೂರು ರಾಜೀನಾಮೆ
ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ನಾಯಕ ಆಯನೂರು ಮಂಜುನಾಥ್ ಬಿಜೆಪಿಗೆ ಹಾಗೂ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ.
ಅವರು ಇಂದು ಜೆಡಿಎಸ್ ಸೇರಿ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಚಿತ್ರದುರ್ಗಾ ಪ್ರವಾಸದಲ್ಲಿರುವ ಜಿಡಿಎಸ್ ನಾಯಕ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಅವರು ಬಿ ಫಾರಂ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಆಯನೂರು ಮಂಜುನಾಥ್ ರಾಜೀನಾಮೆ ನೀಡಿದಲ್ಲಿ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ನಂತರ ಮೂರನೇ ಲಿಂಗಾಯಿತ ನಾಯಕ ಬಿಜೆಪಿ ತೊರೆದಂತಾಗಲಿದೆ.
ನಾಮ ಪತ್ರ ಸಲ್ಲಿಸುವ ಸಿದ್ದರಾಮಯ್ಯಗೆ ಮುನಿಯಪ್ಪ ಸಾಥ್
ವರುಣ ಕ್ಷೇತ್ರದಿಂದ ನಾಮ ಪತ್ರ ಸಲ್ಲಿಸಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ಜತೆಯಾಗಿದ್ದಾರೆ.
ನಾಮ ಪತ್ರಸಲ್ಲಿಸುವುದಕ್ಕಿಂತಲೂ ಮೊದಲು ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯರೊಂದಿಗೆ ಮುನಿಯಪ್ಪ ಕೂಡ ಇದ್ದಾರೆ.
ವಿ.ಶ್ರೀನಿವಾಸ್ ಪ್ರಸಾದ್‌ಗೆ ಪ್ರತಿಯಾಗಿ ಕೆ.ಎಚ್. ಮುನಿಯಪ್ಪರನ್ನು ಸಿದ್ದರಾಮಯ್ಯ ಜತೆಗಿಟ್ಟುಕೊಂಡಿದ್ದು, ಕ್ಷೇತ್ರದ ದಲಿತ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಬಿ ಎಲ್ ಸಂತೋಷ್, ವಿಜಯೇಂದ್ರ ಹೆಸರಿಲ್ಲ
ಬಿಜೆಪಿ ಬುಧವಾರ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಮೂಲದ ಬಿ ಎಲ್ ಸಂತೋಷ್ ಹಾಗೂ ಬಿಜೆಪಿಯ ಉಪಾಧ್ಯಕ್ಷರಾಗಿರುವ ಬಿ ವೈ ವಿಜೇಂದ್ರ ಅವರ ಹೆಸರಿಲ್ಲ.
ಉಳಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಕ್ಷದ ನಾಯಕರಾದ ಬಿ ಎಸ್ ಯಡಿಯೂರಪ್ಪ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶೋಭ ಕರಂದ್ಲಾಜೆ, ಶ್ರೀರಾಮುಲು, ತಾರಾ ಅನುರಾಧ, ಶೃತಿ ಸಹ ಸ್ಟಾರ್ ಕ್ಯಾಂಪೇನ್ ಲಿಸ್ಟ್ ನಲ್ಲಿದ್ದಾರೆ.
ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 40 ಮಂದಿ ಬಿಜೆಪಿ ನಾಯಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಧಾರವಾಡದಲ್ಲಿ 7 ಕೆಜಿ ಚಿನ್ನ ವಶ
ಧಾರವಾಡದಲ್ಲಿ ದಾಖಲೆ ಇಲ್ಲದ 7.ಕೆಜಿ 700ಗ್ರಾ ಚಿನ್ನ ಜಪ್ತಿ ಮಾಡಲಾಗಿದೆ. ಧಾರಾವಾಡ ತಾಲೂಕಿನ ತೇಗೂರು ಚೆಕ್ ಪೋಸ್ಟ್ ನಲ್ಲಿ ಇದನ್ನು ವಶಪಡಿಸಿಕೊಳ್ಳಲಾಗಿದೆ.
ಚಿನ್ನದ ಮೌಲ್ಯ ಒಟ್ಟಾರೆ 5ಕೋಟಿ ರೂ. ಎಂದು ಅಂದಾಜಿಸಲಾಗಿದೆ.