ಶಿವಮೊಗ್ಗ: ಎನ್‌ಪಿಎಸ್ ನೌಕರರ ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷ ಪ್ರಭಾಕರ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಸಿ ಎಸ್ ಷಡಾಕ್ಷರಿ (Shadakshari CS )ಹೇಳಿಕೆ ನೀಡಿದ್ದು, ಇತ್ತೀಚೆಗೆ ಕೆಲ ಕಾಲ ನಡೆದ ಪ್ರಭಾಕರ್ ಅವರ ನಾಪತ್ತೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
ನನ್ನ ಮತ್ತು ಇತರ ಐದು ಅಧಿಕಾರಿಗಳ ವಿರುದ್ಧ ಕೆಲ ಆರೋಪಗಳನ್ನು ಪ್ರಭಾಕರ್ ಮಾಡಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡಿದ್ದೇನೆ. ಅವರು ಈಗ ಏನು ಹೇಳಿಕೆ ಕೊಟ್ಟಿದ್ದಾರೆ ಅಂತ ನನಗೆ ಗೊತ್ತಿಲ್ಲ. ಆದರೆ ಒಂದು ವೇಳೆ ಈಗಲೂ ನನ್ನನ್ನು ಟಾರ್ಗೆಟ್ ಮಾಡಿದ್ರೆ ಚರ್ಚೆಗೆ ಸಿದ್ದನಿದ್ದೇನೆ ಎಂದು ಷಡಾಕ್ಷರಿ ಸವಾಲು ಹಾಕಿದ್ದಾರೆ.
ಪ್ರಭಾಕರ್ ಅವರು ಇತ್ತೀಚೆಗೆ ಮಿಸ್ಸಿಂಗ್ ಆದ ನಂತರ ನಾನು ಕೂಡ ವಿಧಾನಸೌಧದ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟಿದ್ದೇನೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದೇನೆ. ನನಗೂ, ಅವರಿಗೂ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ನನ್ನ ಹತ್ತಿರಾನೂ ಇಲ್ಲ ಅವರ ಬಳಿಯು ಇರಲು ಸಾಧ್ಯವಿಲ್ಲ. ಆದಾಗ್ಯೂ ನನ್ನ ವಿರುದ್ಧ ಆರೋಪ ಮಾಡಿದ್ದರೆ ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಷಡಾಕ್ಷರಿ ಹೇಳಿದರು.
ಪ್ರಭಾಕರ್ ಶಿವಮೊಗ್ಗದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಸಿಆರ್ ಪಿ ಆಗಿಯೂ ಕೆಲಸ ಮಾಡಿದ್ದರು. ನಂತರದಲ್ಲಿ ಉಪನೋಂದಣಾಧಿಕಾರಿ ಕಚೇರಿಗೆ ಆರೋಗ್ಯ ಸಮಸ್ಯೆ ನಿಮಿತ್ತ ವರ್ಗಾವಣೆ ಬಯಸಿದ್ದರು. ಅದರ ಪ್ರಸ್ತಾವನೆಗೆ ಅನುಮತಿ ಕೂಡ ಸಿಕ್ಕಿರುತ್ತೆ. ಒಂದು ವರ್ಷ ಕಾಲ ಅದರ ಲಾಭ ಪಡೆದು ಹೊನ್ನಾಳಿಯಲ್ಲೂ ಕೆಲಸ ಮಾಡಿರುತ್ತಾರೆ. ನಿಯಮಾವಳಿ ಪ್ರಕಾರ ಅವರಿಗೆ ಡಿಮೋಷನ್ ಮಾಡಿರಬೇಕು. ಇದರ ನಡುವೆ ಕೋರ್ಟಿಗೆ ಕೂಡ ಹೋಗಿರುವ ಮಾಹಿತಿ ಲಭ್ಯ ಆಗಿದೆ. ಅದರ ಸಂಪೂರ್ಣ ದಾಖಲಾತಿ ನನಗೆ ಸಿಕ್ಕಿಲ್ಲ. ಸಿಕ್ಕ ನಂತರ ಸಂಪೂರ್ಣ ವಿವರ ನೀಡುತ್ತೇನೆ ಅವರಿಗೆ ಯಾವುದೇ ತೊಂದರೆ ಕೊಡುವಂತಹ ಶಿಫಾರಸು ಪತ್ರ ಕೊಟ್ಟಿಲ್ಲ. ಯಾರಿಗೂ ಫೋನ್ ಮಾಡಿ ಇವರಿಗೆ ಮಾಡಿಕೊಡಬೇಡಿ ಅಂತ ಹೇಳಿಲ್ಲ. ಹೊನ್ನಾಳಿಯಲ್ಲಿ ಅವರಿಗೆ ಸಂಬಳ ಆಗಿಲ್ಲ ಅಂದ್ರೆ ಅದಕ್ಕೆ ನಾನು ಹೇಗೆ ಕಾರಣ?
ಏಳು ತಿಂಗಳು ಸಂಬಳ ಆಗಿಲ್ಲ ಅಂದರೆ ನನ್ನ ಗಮನಕ್ಕೆ ತಂದಿದ್ರೆ ನಾನು ತಕ್ಷಣ ಸಂಬಳ ಮಾಡಿಕೊಡಲು ಹೇಳುತ್ತಿದ್ದೆ. ನನಗೆ ಗೊತ್ತಿಲ್ಲದ ವಿಷಯ ಹೇಳದೆ ಇದ್ದರೆ ಅದಕ್ಕೆ ನಾನು ಕಾರಣನಲ್ಲ. ಯಾವುದೇ ಸಂಬಳ ಬಾಕಿ ಇಲ್ಲ ಅಂತ ಹೊನ್ನಾಳಿ ಬಿಇಓ ಹೇಳಿಕೆ ಕೊಟ್ಟಿದ್ದಾರೆ. ಸಂಬಳ ಕೊಡುವುದು ಅಧಿಕಾರಿಗಳು ನಾನಲ್ಲ. ಅವರು ಸಮಸ್ಯೆ ಹೇಳಿಕೊಂಡರೆ ನಾನು ಸ್ಪಂದಿಸಬಹುದು ಅಷ್ಟೇ. ಡಿಮೋಷನ್ ಮಾಡುವುದು ಸರ್ಕಾರದ ಮಟ್ಟದಲ್ಲಿ. ಅದಕ್ಕೆ ಕಾನೂನುಗಳಿವೆ, ಅದರ ಅಡಿಯಲ್ಲಿ ಅವರು ಮಾಡಿರುತ್ತಾರೆ. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹೇಳಿದರೆ ಅಧಿಕಾರಿಗಳು ಮಾಡುವುದಿಲ್ಲ. ಕಾನೂನಿನಲ್ಲಿ ಅವಕಾಶ ಇದ್ದರೆ ಮಾತ್ರ ಮಾಡ್ತಾರೆ.
ಇದನ್ನೂ ಓದಿ: Govt Employees Strike : ಯಶಸ್ಸು ಪಡೆದ ಮುಷ್ಕರ; ಷಡಾಕ್ಷರಿಗೆ ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ
ಪ್ರಭಾಕರ್ ಅವರ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಅವರಿಗೆ ತೊಂದರೆ ಕೊಡಿ ಅಂತ ನಾನೇನಾದರೂ ಹೇಳಿದ್ದರೆ, ಶಿಫಾರಸು ಪತ್ರ ಕೊಟ್ಟಿದ್ದರೆ ದಾಖಲಾತಿ ತೋರಿಸಲಿ. ಅವರಿಗೆ ಮಾನಸಿಕ ಕಿರಿಕಿರಿ ಆಗಿರಬೇಕು. ಅವರಿಗೆ ಶಿವಮೊಗ್ಗದಲ್ಲಿ, ಬೆಂಗಳೂರಿನಲ್ಲಿ ನಮ್ಮ ಸಹಕಾರಿ ಸಂಘದಿಂದ ತಲಾ 5 ಲಕ್ಷ ಸಾಲ ನಾವೇ ಕೊಟ್ಟಿದ್ದೇವೆ. ಅವರು ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬರಲು ನಾನು ಶಿಫಾರಸು ಪತ್ರ ಕೂಡ ಕೊಟ್ಟಿದ್ದೆ ನಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿದ್ದೇವೆ ಎಂದು ಷಡಾಕ್ಷರಿ ವಿವರಿಸಿದ್ದಾರೆ.