ಕಾರವಾರ: ಮುಂಬಯಿಂದ ಮಂಗಳೂರಿಗೆ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ರೈಲ್ವೇ ಪೊಲೀಸರು ಇಲ್ಲಿಯ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದ್ದು, ಈ ಸಂದರ್ಭದಲ್ಲಿ ದಾಖಲೆ ಇಲ್ಲದ ಎರಡು ಕೋಟಿ ರೂ. ನಗದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ.
ಮುಂಬಯಿಯ ಭರತ್ ಎಂಬುವರ ಬಳಿ 15 ಸಾವಿರ ರೂ. ವೇತನಕ್ಕೆ ಕೆಲಸ ಮಾಡುತಿದ್ದ ಆರೋಪಿಯು ತನ್ನ ಮಾಲೀಕರಿಗೆ ಸೇರಿದ ಈ ಹಣವನ್ನು ಬ್ಯಾಗಿನಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ. ಮಂಗಳೂರಿನಲ್ಲಿ ರಾಜು ಎಂಬುವವರಿಗೆ ತಲುಪಿಸಲು ಆತ ಹೊರಟಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರೈಲ್ವೇ ಪೊಲೀಸರು ಆರೋಪಿಯನ್ನು ಕಾರವಾರ ಗ್ರಾಮಾಂತರ ಠಾಣಾ ಪೊಲೀಸರ ವಶಕ್ಕೆ ನೀಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ. ಕೈಯಲ್ಲಿ ಇಷ್ಟೊಂದು ಹಣವಿದ್ದರೂ ಆತ ಏಕೆ ಟಿಕೆಟ್ ತೆಗೆದುಕೊಂಡಿರಲಿಲ್ಲ ಎಂದು ಪೊಲೀಸರೇ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ| ಸ್ನೇಹಿತನ ಫೇಸ್‌ಬುಕ್ ಪೋಸ್ಟ್‌ನಿಂದ ಸಿಕ್ಕಿಬಿದ್ದ ಕಳ್ಳರು