ಬೆಂಗಳೂರು: ಶಓಮಿ ಇಂಡಿಯಾಗೆ ಸೇರಿದ ಫಿಕ್ಸ್ಡ್ ಡಿಪಾಸಿಟ್ನಲ್ಲಿರುವ ₹3,700 ಕೋಟಿಗಳನ್ನು ಆರು ತಿಂಗಳ ಕಾಲ ಜಪ್ತಿ ಮಾಡಿ ತಾತ್ಕಾಲಿಕ ಆದೇಶ ಮಾಡಿದ್ದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು (Xiaomi case) ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.
“ಆದಾಯ ತೆರಿಗೆ ಇಲಾಖೆಯು ಹೊರಡಿಸಿರುವ ಆಕ್ಷೇಪಾರ್ಹ ಆದೇಶವು ಅಕ್ರಮ, ಸ್ವೇಚ್ಛೆ ಮತ್ತು ಕಾನೂನಿಗೆ ವಿರುದ್ಧವಾಗಿದ್ದು, ಅದು ವಜಾಕ್ಕೆ ಅರ್ಹವಾಗಿದೆ” ಎಂದು ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿದೇಶದ ಯಾವುದೇ ಸಂಸ್ಥೆಗೆ ರಾಜಧನ ಅಥವಾ ಯಾವುದೇ ತೆರನಾದ ಹಣ ಪಾವತಿಸದಂತೆ ಶಓಮಿಗೆ ಸೂಚಿಸಿದೆ.
ಪರಿಶೀಲನೆಯ ಬಳಿಕ ಬೃಹತ್ ಮೊತ್ತದ ತೆರಿಗೆ ಬೇಡಿಕೆ ಇಡುವ ಸಾಧ್ಯತೆ ಇರುತ್ತದೆ ಎಂಬ ಅಳುಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕ ಜಪ್ತಿ ಆದೇಶ ಮಾಡಲಾಗದು ಎಂದು ಆದಾಯ ತೆರಿಗೆ ಇಲಾಖೆಯನ್ನು ಕುರಿತು ನ್ಯಾಯಾಲಯ ಹೇಳಿದೆ.
“ಆಕ್ಷೇಪಾರ್ಹವಾದ ಆದೇಶವನ್ನು ಯಾಂತ್ರಿಕವಾಗಿ ಹೊರಡಿಸಲಾಗಿದ್ದು, ಎರವಲು ಪಡೆದ ಅಭಿಪ್ರಾಯದ ಆಧಾರದ ಮೇಲೆ ರೂಪಿತವಾಗಿದೆ. ಮೌಲ್ಯಮಾಪನ ಅಧಿಕಾರಿಯ ತನ್ನ ಅಭಿಪ್ರಾಯ ರೂಪಿಸಿಕೊಳ್ಳಬೇಕೆನ್ನುವ ಪರೀಕ್ಷೆಯನ್ನು ಆದೇಶ ಪೂರೈಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದ್ದು, ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಬದಿಗೆ ಸರಿಸಿದೆ.
ಇದನ್ನೂ ಓದಿ | Karnataka Highcourt | ಮುಸ್ಲಿಮ್ ಆದರೂ ಅಷ್ಟೇ, ಬಾಲಕಿಯನ್ನು ಮದ್ವೆಯಾದ್ರೆ ಅದು ಅಸಿಂಧು, ಪೋಕ್ಸೊ ಕೇಸ್ ಎದುರಿಸಲೇಬೇಕು
ಏನಿದು ಪ್ರಕರಣ?
ಭಾರತದ ಹೊರಗಿನ ಹಣ ಪಾವತಿಗೆ ಸಂಬಂಧಿಸಿದಂತೆ ಶಓಮಿ ಇಂಡಿಯಾಕ್ಕೆ ಷರತ್ತುಗಳನ್ನು ವಿಧಿಸಲಾಗಿದೆ. ಪ್ರತಿವಾದಿಗಳು 2023ರ ಮಾರ್ಚ್ 31ರ ಒಳಗೆ ಕರಡು ಪರಿಶೀಲನೆ ಮುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಶಓಮಿ ಇಂಡಿಯಾ ಸಂಸ್ಥೆಯು ರಾಜಧನ ಪಾವತಿಸಬೇಕು ಎಂದು ಕಾರಣ ನೀಡಿ ಲಾಭವನ್ನು ವಿದೇಶಕ್ಕೆ ವರ್ಗಾಯಿಸುವ ಕೆಲಸದಲ್ಲಿ ನಿರತವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಮಾಡಲಾಗಿತ್ತು.
ಜಪ್ತಿ ಏತಕ್ಕಾಗಿ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿಲ್ಲ. ಸೂಕ್ತ ಕಾರಣಗಳನ್ನು ನೀಡದೇ ಇರುವುದರಿಂದ ಜಪ್ತಿ ಆದೇಶ ಮಾಡಿರುವುದಕ್ಕೆ ಹೊಸ ಆಧಾರವನ್ನು ಸೇರಿಸುವಂತಿಲ್ಲ ಎಂದು ಶಓಮಿ ವಾದಿಸಿತ್ತು. ಶಓಮಿಯು ತೆರಿಗೆ ಪಾವತಿಯಿಂದ ಪಾರಾಗಲು ತೆರಿಗೆ ವಿಧಿಸಬಹುದಾದ ಆದಾಯವನ್ನು ಕಡಿತ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ವಾದಿಸಿತ್ತು.
ಇದನ್ನೂ ಓದಿ | Xiaomi Job cuts | ಶೇ.15ರಷ್ಟು ಉದ್ಯೋಗ ಕಡಿತ ಮಾಡಿದ ಸ್ಮಾರ್ಟ್ಫೋನ್ ಕಂಪನಿ ಶವೊಮಿ?