Site icon Vistara News

Students Fall Sick: ಬಿಸಿಯೂಟ ಸೇವಿಸಿ ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆರೋಗ್ಯ ವಿಚಾರಿಸಿದ ಶಾಸಕ

Students Fall Sick

Students Fall Sick

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದು (Students Fall Sick), ದೋರನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಸದ್ಯ ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದು, ದೋರನಹಳ್ಳಿ ಆಸ್ಪತ್ರೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ (Yadagiri News).

ಖಾಸಗಿ ಏಜೆನ್ಸಿಯಿಂದ ಪೂರೈಕೆಯಾದ ಬಿಸಿಯೂಟವನ್ನು ಶುಕ್ರವಾರ ಮಧ್ಯಾಹ್ನ ಸೇವಿಸಿದ ವಿದ್ಯಾರ್ಥಿಗಳು ಬಳಿಕ ಅಸ್ವಸ್ಥರಾಗಿದ್ದರು. ಅನ್ನ, ಸಾಂಬರ್ ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ-ಬೇಧಿ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಾಸಕರು ಹೇಳಿದ್ದೇನು?

ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ ಅವರು, ʼʼದೋರನಹಳ್ಳಿ ಗ್ರಾಮದ ನಾಲ್ಕು ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ. ಊಟವಾದ ನಂತರ ವಾಂತಿ-ಭೇದಿ ಕಾಣಿಸಿಕೊಂಡಿದೆ. ಈ ಪೈಕಿ ಮೂವರು ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆʼʼ ಎಂದು ತಿಳಿಸಿದ್ದಾರೆ.

ʼʼಖಾಸಗಿ ಏಜೆನ್ಸಿಯಿಂದ ಶಾಲೆಗೆ ಊಟ ಪೂರೈಕೆಯಾಗಿದೆ ಎನ್ನುವುದು ತಿಳಿದು ಬಂದಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುತ್ತೇವೆʼʼ ಎಂದು ಅವರು ವಿವರಿಸಿದ್ದಾರೆ.

ಅಧಿಕಾರಿಗಳ ಭೇಟಿ

ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಪ್ರಕರಣ ಬೆಳಕಿಗೆ ಬರುತ್ತಲೇ ದೋರನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಅಧಿಕಾರಿಗಳ ದಂಡು ದೌಡಾಯಿಸಿ ಆರೋಗ್ಯ ವಿಚಾರಿಸಿದೆ. ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ಜಿಲ್ಲಾ ಪಂಚಾಯತ್‌ ಸಿಇಒ ಗರೀಮಾ ಪನ್ವಾರ್, ಎಸ್‌ಪಿ ಜಿ. ಸಂಗೀತಾ ಸೇರಿ ಅಧಿಕಾರಿಗಳ ತಂಡ ಆಗಮಿಸಿ ಮಾಹಿತಿ ಕಲೆ ಹಾಕಿದೆ.

ಇದನ್ನೂ ಓದಿ: Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಬುರ್ಕಾ ಧರಿಸಿ ಓಡಾಡ್ತಿದ್ದ ವ್ಯಕ್ತಿಗೆ ಮಹಿಳೆಯರಿಂದ ಚಪ್ಪಲಿ ಏಟು!

ಬಾಗಲಕೋಟೆ: ಬುರ್ಕಾ ಧರಿಸಿ ಓಡಾಡ್ತಿದ್ದ ವ್ಯಕ್ತಿಗೆ ಮಹಿಳೆಯರಿಂದ ಚಪ್ಪಲಿ ಏಟು ಬಿದ್ದಿರುವ ಘಟನೆ ಇಳಕಲ್‌ ನಗರದ (Bagalkot News) ಎಸಿಒ ಶಾಲೆ ಬಳಿ ನಡೆದಿದೆ. ಬುರ್ಕಾ ಧರಿಸಿ ಹೋಗುತ್ತಿದ್ದಾಗ ಅನುಮಾನ ಬಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಮಹಿಳೆಯಲ್ಲ, ಪುರುಷ ಎಂದು ತಿಳಿದುಬಂದಿದ್ದರಿಂದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೇ ವೇಳೆ ಮಹಿಳೆಯರು ಕೂಡ ಬಾಯಿಗೆ ಬಂದಂತೆ ಬೈಯ್ದು ಚಪ್ಪಲಿಯಿಂದ ಹೊಡೆದಿದ್ದಾರೆ.

ವಿಚಾರಣೆ ವೇಳೆ ಬುರ್ಕಾ ಧರಿಸಿದ್ದ ವ್ಯಕ್ತಿ ಹುನಗುಂದ ತಾಲೂಕಿನ ವೀರಾಪುರ ನಿವಾಸಿ ಮಹಾಂತೇಶ್ ರಾಮವಾಡಗಿ (36) ಎಂದು ತಿಳಿದುಬಂದಿದೆ. ನಗರದಲ್ಲಿ ಬುರ್ಕಾದಲ್ಲಿ ಓಡಾಡುತ್ತಿದ್ದರಿಂದ ಸಂಶಯ ಬಂದು ವಿಚಾರಿಸಿದಾಗ ಮಹಿಳೆ ಅಲ್ಲ ಎಂದು ಗೊತ್ತಾಗಿದೆ. ಇದರಿಂದ ಸ್ಥಳದಲ್ಲಿದ್ದ ಜನತೆಯಿಂದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಆತನ ಚೀಲ ಪರಿಶೀಲಿಸಿದಾಗ ಚಾಕು, ಕತ್ತರಿ ಕಂಡುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಇಳಕಲ್‌ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಪ್ಪಲಿ ಏಟು ತಿಂದ ವ್ಯಕ್ತಿಗೆ ಹೆಂಡತಿ, ಮಗ ಇದ್ದು, ಮಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಗದಗಗೆ ಬಂದು, ಬುರ್ಕಾ ಖರೀದಿಸಿದ್ದ ಮಹಾಂತೇಶ್, ಇಳಕಲ್‌ನಲ್ಲಿ ಓಡಾಡುತ್ತಿದ್ದ. ಇಳಕಲ್ ಠಾಣೆಗೆ ಮಹಾಂತೇಶ್ ಸಂಬಂಧಿಕರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version