Site icon Vistara News

ಕ್ವಾಟ್ಲೆ ಕೊಟ್ಟ ಬಾಸ್‌ನ ಬೆತ್ತಲೆ ಫೋಟೊ ವೈರಲ್‌ ಮಾಡಿದ ಉದ್ಯೋಗಿಗಳು; ಸೇಡೆಂದರೆ ಇದು

Honey Trap

Employees circulate nude photos of boss to take revenge in Gujarat

ಗಾಂಧಿನಗರ: ಜಗತ್ತಿನಲ್ಲಿ ಬಾಸ್‌ (Boss) ಎಂದರೆ ಸುಖಾಸುಮ್ಮನೆ ಬೈಯುವವನು, ಎಷ್ಟೇ ಕೆಲಸ ಮಾಡಿದರೂ ತಪ್ಪು ಹುಡುಕುವವನು, ಬಾಯಿ ಚಟಕ್ಕಾದರೂ ಉದ್ಯೋಗಿಗಳ ಮೇಲೆ ರೇಗುವವನು ಎಂಬ ಮಾತಿದೆ. ಬಹುತೇಕ ಬಾಸ್‌ಗಳು ಕೂಡ ಹೀಗೆಯೇ ವರ್ತಿಸುತ್ತಾರೆ. ಇದೇ ಕಾರಣಕ್ಕಾಗಿ ಬಾಸ್‌ನನ್ನು ಹೆಂಡತಿಗೆ ಹೋಲಿಸುವವರು ಇದ್ದಾರೆ. ಹೀಗೆ, ಗುಜರಾತ್‌ನಲ್ಲಿ ಕ್ವಾಟ್ಲೆ ಕೊಡುತ್ತಿದ್ದ, ರೇಗಾಡುವುದು, ಬಾಯಿಗೆ ಬಂದಹಾಗೆ ಮಾಡುತ್ತಿದ್ದ ಕಂಪನಿ ಬಾಸ್‌ನ ಬೆತ್ತಲೆ ಫೋಟೊಗಳನ್ನು ಇಬ್ಬರು ಉದ್ಯೋಗಿಗಳು ವೈರಲ್‌ (Viral News) ಮಾಡುವ ಮೂಲಕ ಆತನ ವಿರುದ್ಧ ಸೇಡು (Revenge) ತೀರಿಸಿಕೊಂಡಿದ್ದಾರೆ.

ಗುಜರಾತ್‌ನ ವಡೋದರದಲ್ಲಿರುವ ಕಂಪನಿಯ ಒಬ್ಬ ಮಹಿಳಾ ಉದ್ಯೋಗಿ ಸೇರಿ ಇಬ್ಬರು ಉದ್ಯೋಗಿಗಳು ಹನಿ ಟ್ರ್ಯಾಪ್‌ ಮಾಡುವ ಮೂಲಕ ಬಾಸ್‌ನ ಮಾನ ಹರಾಜು ಹಾಕಿದ್ದಾರೆ. ಕೆಲ ತಿಂಗಳ ಹಿಂದೆ ಬಾಸ್‌ ಕಿರಿಕಿರಿ ತಾಳದೆ ಮಹಿಳಾ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಆದರೆ, ದಿನವಿಡೀ ಕಾಟ ಕೊಟ್ಟ ಬಾಸ್‌ಗೆ ತಕ್ಕ ಪಾಠ ಕಲಿಸಲು ಮುಂದಾದ ಆಕೆಯು ಮತ್ತೊಬ್ಬ ಸಹೋದ್ಯೋಗಿ ಜತೆ ಕೈಜೋಡಿಸಿ ಹನಿ ಟ್ರ್ಯಾಪ್‌ ಮಾಡಿದ್ದಾರೆ. ಬಾಸ್‌ನಿಂದಲೇ ಆತನ ಬೆತ್ತಲೆ ಫೋಟೊಗಳನ್ನು ಪಡೆದು, ಅವುಗಳನ್ನು ಆತನ ಹೆಂಡತಿಗೆ ಕಳುಹಿಸಿದ್ದಾರೆ. ಹಾಗೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಬಾಸ್‌ನನ್ನು ‘ಮಂಗ’ ಮಾಡಿದ್ದು ಹೇಗೆ?

ಕಚೇರಿಗೆ ಬಂದರೆ ಸಾಕು ಕಿರಿಕಿರಿ ಮಾಡುತ್ತಿದ್ದ, ಸುಖಾಸುಮ್ಮನೆ ಎಲ್ಲರೆದುರು ಬೈಯುತ್ತಿದ್ದ ಬಾಸ್‌ಗೆ ಪಾಠ ಕಲಿಸಲು ಇಬ್ಬರೂ ತೀರ್ಮಾನಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹೆಣ್ಣುಮಕ್ಕಳ ಹೆಸರಿನಲ್ಲಿ ಎರಡು ನಕಲಿ ಖಾತೆಗಳನ್ನು ತೆರೆದಿದ್ದಾರೆ. ಇದಾದ ಬಳಿಕ ಆ ನಕಲಿ ಖಾತೆಗಳಿಂದ ಬಾಸ್‌ ಜತೆ ರೊಮ್ಯಾಂಟಿಕ್‌ ಆಗಿ ಚಾಟ್‌ ಮಾಡಿದ್ದಾರೆ. ನಕಲಿ ಖಾತೆಗಳು ಎಂಬುದನ್ನು ಅರಿಯದ, ಹುಡುಗಿಯರನ್ನು ಪಟಾಯಿಸಿದೆ ಎಂಬ ಖುಷಿಯಲ್ಲಿದ್ದ ಬಾಸ್‌, ಯುವತಿಯರು ಕೇಳಿದರು ಎಂದು ತನ್ನ ಬೆತ್ತಲೆ ಫೋಟೊಗಳನ್ನು ಕಳುಹಿಸಿದ್ದಾನೆ. ಬಾಸ್‌ನ ಫೋಟೊಗಳಿಗೆ ಕಾಯುತ್ತಿದ್ದ ಯುವತಿಯರು, ಅವು ಸಿಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಮೂಲಕ, ಕಚೇರಿಯ ಎಚ್‌ಆರ್‌ ಡಿಪಾರ್ಟ್‌ಮೆಂಟ್‌ಗೆ ಮೇಲ್‌ ಮಾಡುವ ಮೂಲಕ ಆತನ ಮರ್ಯಾದೆ ಕಳೆದಿದ್ದಾರೆ.

ಇದನ್ನೂ ಓದಿ: DRDO Espionage: ಹನಿ ಟ್ರ್ಯಾಪ್‌, ಪಾಕ್‌ ಯುವತಿ ಜತೆ ಬ್ರಹ್ಮೋಸ್‌ ಕ್ಷಿಪಣಿ ರಹಸ್ಯ ಹಂಚಿಕೊಳ್ಳಲು ಮುಂದಾಗಿದ್ದ ಡಿಆರ್‌ಡಿಒ ವಿಜ್ಞಾನಿ!

ಮೂಲಗಳ ಪ್ರಕಾರ, ಕಳೆದ ಮೂರು ತಿಂಗಳಿಂದ ಇಬ್ಬರು ಉದ್ಯೋಗಿಗಳು ಬಾಸ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ನಿನ್ನ ಹೆಂಡತಿಗೆ ಕಳುಹಿಸುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಆರಂಭದಲ್ಲಿ ಮರ್ಯಾದೆಗೆ ಅಂಜಿ ಸುಮ್ಮನಿದ್ದ ಬಾಸ್‌ಗೆ ಇಬ್ಬರ ಕಿರುಕುಳ ತಾಳಲು ಆಗಿಲ್ಲ. ಇದರಿಂದ ಬೇಸತ್ತು ಬಾಸ್‌ ಸೈಬರ್‌ ಕ್ರೈಂಗೆ ದೂರು ಕೊಟ್ಟಿದ್ದಾನೆ. ಪೊಲೀಸರು ತನಿಖೆ ಮಾಡಿದ ಬಳಿಕ, ಆ ಫೋಟೊಗಳನ್ನು ಜಗಜ್ಜಾಹೀರು ಮಾಡಿದ್ದು ಆತನ ಉದ್ಯೋಗಿಗಳೇ ಎಂದು ತಿಳಿದುಬಂದಿದೆ. ಬಾಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version