ಹೊಸ ದಿಲ್ಲಿ: ಭಾರತದಲ್ಲಿ, ಮುಖ್ಯವಾಗಿ ಜಮ್ಮು- ಕಾಶ್ಮೀರದಲ್ಲಿ ಮಕ್ಕಳ ಸುರಕ್ಷತೆಯ ಸ್ಥಿತಿಗತಿ (kashmir children) ಉತ್ತಮವಾಗಿರುವ ಹಿನ್ನೆಲೆಯಲ್ಲಿ, ದೇಶದ ಹೆಸರನ್ನು ವಿಶ್ವಸಂಸ್ಥೆಯ ʼಮಕ್ಕಳು ಮತ್ತು ಸಶಸ್ತ್ರ ಸಂಘರ್ಷʼ (children and armed conflict) ಪಟ್ಟಿಯಿಂದ (UN Report) ಕೈಬಿಡಲಾಗಿದೆ. ಕಳೆದ 12 ವರ್ಷಗಳಿಂದ ಈ ಪಟ್ಟಿಯಲ್ಲಿ ಭಾರತದ ಹೆಸರಿತ್ತು.
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಈ ಕುರಿತು ಪ್ರಕಟಣೆ ನೀಡಿದ್ದಾರೆ. “ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು” ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ ಭಾರತವನ್ನು 2023ರಲ್ಲಿ ವರದಿಯಿಂದ ತೆಗೆದುಹಾಕಲಾಗಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳು ಹಾಗೂ ಭಯೋತ್ಪಾದಕರ ಸಂಘರ್ಷದ ಹಿನ್ನೆಲೆಯಲ್ಲಿ ʼಮಕ್ಕಳು ಮತ್ತು ಸಶಸ್ತ್ರ ಸಂಘರ್ಷʼ ಪಟ್ಟಿಯಲ್ಲಿ 2010ರಲ್ಲಿ ಭಾರತವನ್ನು ಸೇರಿಸಲಾಗಿತ್ತು. ಬುರ್ಕಿನಾ ಫಾಸೊ, ಕ್ಯಾಮರೂನ್, ಲೇಕ್ ಚಾಡ್ ಬೇಸಿನ್, ನೈಜೀರಿಯಾ, ಪಾಕಿಸ್ತಾನ ಮತ್ತು ಫಿಲಿಪ್ಪೀನ್ಸ್ ದೇಶಗಳ ಹೆಸರು ಈ ಪಟ್ಟಿಯಲ್ಲಿದೆ.
2019ರ ಬಳಿಕ ತೆಗೆದುಕೊಳ್ಳಲಾದ ವಿವಿಧ ನೀತಿಗಳು ಮತ್ತು ಸಾಂಸ್ಥಿಕ ಬದಲಾವಣೆಗಳ ಕಾರಣದಿಂದ ಇದು ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಮಕ್ಕಳ ರಕ್ಷಣೆ ವಿಷಯಗಳ ಕುರಿತು ಸಹಕಾರ ಮತ್ತು ಸಹಯೋಗಕ್ಕಾಗಿ ಮಾರ್ಗಸೂಚಿಯನ್ನು ಸಚಿವಾಲಯವು ಅಭಿವೃದ್ಧಿಪಡಿಸಿದೆ.
ಇದು ಭಾರತದ ದೊಡ್ಡ ಸಾಧನೆ. 12 ವರ್ಷಗಳ ಅವಧಿಯ ನಂತರ ಈ ಪಟ್ಟಿಯಿಂದ ನಮ್ಮ ಹೆಸರನ್ನು ತೆಗೆದುಹಾಕಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಮಕ್ಕಳ ಸುರಕ್ಷತೆ ಇರಲಿಲ್ಲ. ಬಾಲಾಪರಾಧ ಕಾಯಿದೆಯನ್ನು ಜಾರಿಗೆ ತರಲಾಗಿರಲಿಲ್ಲ. ಅಲ್ಲಿನ ಬಾಲಾಪರಾಧಿಗಳ ಮನೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇಂದು ಮಕ್ಕಳ ಕಲ್ಯಾಣ ಸಮಿತಿಗಳು, ಬಾಲ ನ್ಯಾಯ ಮಂಡಲಿಗಳು, ಮಕ್ಕಳ ಆರೈಕೆ ಮನೆಗಳಂತಹ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗಿದೆ ಎಂದು ಡಬ್ಲ್ಯುಸಿಡಿ ಕಾರ್ಯದರ್ಶಿ ಇಂದೇವರ್ ಪಾಂಡೆ ಹೇಳಿದ್ದಾರೆ.
ವಿಶ್ವಸಂಸ್ಥೆ ಸೂಚಿಸಿದ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಕ್ಕಳ ರಕ್ಷಣೆಯ ಕುರಿತು ಭದ್ರತಾ ಪಡೆಗಳಿಗೆ ತರಬೇತಿ ನೀಡಲಾಗಿದೆ. ಪೆಲೆಟ್ ಗನ್ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. JJ ಕಾಯಿದೆ ಮತ್ತು POCSO ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ ಪಾಂಡೆ.
ಭಾರತ ಸರ್ಕಾರ ಈ ಅಮಾನುಷ ಪಟ್ಟಿಯಿಂದ ನಮ್ಮ ದೇಶದ ಹೆಸರನ್ನು ಹೊರಗಿಡುವ ಪ್ರಯತ್ನಗಳಲ್ಲಿ ಸತತವಾಗಿ ತೊಡಗಿಸಿಕೊಂಡಿತ್ತು. 2021ರ ನವೆಂಬರ್‌ನಲ್ಲಿ ನಡೆದ ಅಂತತ್ ಸಚಿವಾಲಯ ಸಭೆಯ ನಂತರ ಸೆಕ್ರೆಟರಿ ಜನರಲ್ (SRSG) ರ ವಿಶೇಷ ಪ್ರತಿನಿಧಿಯೊಂದಿಗೆ ಭಾರತ ಸರ್ಕಾರದ ಮಾತುಕತೆ ಕ್ಷಿಪ್ರಗೊಂಡಿತು. ಈ ವಿಷಯದಲ್ಲಿ ಆದ್ಯತೆಗಳನ್ನು ಗುರುತಿಸುವುದು, ಮಕ್ಕಳ ರಕ್ಷಣೆಯನ್ನು ಹೆಚ್ಚಿಸಲು ಮಧ್ಯಸ್ಥಿಕೆಗಳು, ಮಕ್ಕಳ ರಕ್ಷಣೆಗಾಗಿ ಸಹಕಾರದ ಕ್ಷೇತ್ರಗಳನ್ನು ಗುರುತಿಸಲು ವಿಶ್ವಸಂಸ್ಥೆ ಜತೆಗೆ ಸಚಿವಾಲಯ ವಿಭಾಗ, ತಾಂತ್ರಿಕ ಮಟ್ಟದ ಸಭೆಗಳನ್ನು ನಡೆಸಲು ಜಂಟಿ ತಾಂತ್ರಿಕ ಸಮಿತಿ ರಚಿಸಲಾಯಿತು. SRSG ಕಚೇರಿಯ ತಾಂತ್ರಿಕ ತಂಡ ಜುಲೈ 27-29, 2022ರಂದು ಭಾರತಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಕುರಿತು ನವೆಂಬರ್ 2022ರಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾರ್ಯಾಗಾರ ನಡೆಸಲಾಯಿತು.
ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲಾಪರಾಧಿ ನ್ಯಾಯ ಮಂಡಳಿಗಳಂತಹ ಶಾಸನಬದ್ಧ ಸಂಸ್ಥೆಗಳು ಈಗ ಇಲ್ಲಿ ಕಾರ್ಯಾಚರಿಸುತ್ತಿವೆ. ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 2023ರಲ್ಲಿ ಭಾರತವನ್ನು ವರದಿಯಿಂದ ತೆಗೆದುಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಐವರು ಭಯೋತ್ಪಾದಕರ ಹತ್ಯೆಗೈದ ಸೆಕ್ಯುರಿಟಿ ಫೋರ್ಸ್