Site icon Vistara News

Manipur Violence: ಮಣಿಪುರ ಅಲ್ಲ ‘ಹೆಣಪುರ’; ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ಸುಟ್ಟ ದುರುಳರು

Manipur Violence

Manipur Violence: Wife of freedom fighter burnt alive inside her house

ಇಂಫಾಲ: ಮಣಿಪುರದ ಹಿಂಸಾಚಾರ ಎಲ್ಲೆ ಮೀರಿದೆ. ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ, ಮಹಿಳೆಯರ ಮೇಲೆ ಅತ್ಯಾಚಾರ, ಅವರ ರುಂಡ ಚೆಂಡಾಡುವುದು, ಎಲ್ಲಿ ಸಿಕ್ಕಲ್ಲಿ ಜನರನ್ನು ಕೊಲೆ ಮಾಡುವುದು, ಮನೆಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ದೇಶವನ್ನೇ (Manipur Violence) ಬೆಚ್ಚಿಬೀಳಿಸಿವೆ. ಇಂತಹ ಪರಿಸ್ಥಿತಿಯ ಬೆನ್ನಲ್ಲೇ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಜೀವಂತವಾಗಿ ಸುಟ್ಟ ಪ್ರಕರಣ ಈಗ ದೇಶಾದ್ಯಂತ ಸುದ್ದಿಯಾಗಿದೆ.

ಹೌದು, ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ನಡುವಿನ ಕಾಳಗ ಉಚ್ಛ್ರಾಯ ಸ್ಥಿತಿ ತಲುಪಿದ ಅಂದರೆ, ಮೇ 28ರಂದು ಕಾಕ್‌ಚಿಂಗ್‌ ಜಿಲ್ಲೆಯ ಸೆರೌ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಡಲಾಗಿದೆ. ಅವರು ಮನೆಯಲ್ಲಿದ್ದಾಗ ಮನೆಗೆ ಬೆಂಕಿ ಹಚ್ಚಲಾಗಿದ್ದು, 80 ವರ್ಷದ ಮಹಿಳೆಯು ಸಜೀವವಾಗಿ ದಹನವಾಗಿದ್ದಾರೆ. ಇವರು ಸ್ವಾತಂತ್ರ್ಯ ಹೋರಾಟಗಾರ, ದಿವಂಗತ ಎಸ್.‌ ಚಂದ್ರಚೂಡ್‌ ಸಿಂಗ್‌ ಅವರ ಪತ್ನಿ ಎಂದು ತಿಳಿದುಬಂದಿದೆ. ಎಸ್.ಚಂದ್ರಚೂಡ್‌ ಸಿಂಗ್ ಅವರು ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ರಾಷ್ಟ್ರಪತಿ ಆಗಿದ್ದಾಗ ಅವರಿಂದ ಸನ್ಮಾನ ಸ್ವೀಕರಿಸಿದ ಫೋಟೊಗಳು ಕೂಡ ಲಭ್ಯವಾಗಿವೆ.

ಸ್ವಾತಂತ್ರ್ಯ ಹೋರಾಟಗಾರ ಎಸ್.ಚಂದ್ರಚೂಡ್‌ ಸಿಂಗ್‌ ಅವರ ಮೊಮ್ಮಗ ಪ್ರೇಮಕಾಂತ ಅವರು ಘಟನೆಯ ಕುರಿತು ಮಾಧ್ಯಮಗಳಿಗೆ ವಿವರಿಸಿದ್ದಾರೆ. “ಉದ್ರಿಕ್ತರ ಗುಂಪು ದಾಳಿ ಮಾಡಿದಾಗ ನನ್ನ ಚಿಂತೆ ಬಿಡಿ. ನೀವು ಮೊದಲು ಇಲ್ಲಿಂದ ಓಡಿ ಹೋಗಿ. ಆಮೇಲೆ ಬಂದು ನನ್ನನ್ನು ಕರೆದುಕೊಂಡು ಹೋಗಿ ಎಂದು ನಮ್ಮನ್ನು ಕಳುಹಿಸಿದರು. ಆದರೆ, ನಾವು ವಾಪಸ್‌ ಬರುವಷ್ಟರಲ್ಲಿ ಅವರು ಬೆಂಕಿಗೆ ಆಹುತಿಯಾಗಿದ್ದರು” ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Manipur Video: ಮಣಿಪುರದಲ್ಲಿ ದೌರ್ಜನ್ಯಕ್ಕೀಡಾದ ಮಹಿಳೆಯ ಪತಿ ಕಾರ್ಗಿಲ್‌ ಯೋಧ; ಕೃತ್ಯ ನೆನೆದು ಕಣ್ಣೀರು

ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅವರನ್ನು ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಒಬ್ಬ ಮಹಿಳೆಯು ಮಾಜಿ ಯೋಧನ ಪತ್ನಿ ಎಂದು ತಿಳಿದುಬಂದಿದೆ. “ನಾನು ದೇಶಕ್ಕಾಗಿ ಹೋರಾಡಿದೆ. ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ಶಾಂತಿ ಸ್ಥಾಪನೆ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದೆ. ನಾನು ನನ್ನ ದೇಶವನ್ನು ರಕ್ಷಣೆ ಮಾಡಿದೆ. ಅದರೆ, ನಿವೃತ್ತನಾದ ನಂತರ ನನ್ನ ಪತ್ನಿಯನ್ನು, ನನ್ನೂರಿನ ಗ್ರಾಮಸ್ಥರನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ” ಎಂಬುದಾಗಿ ನಿವೃತ್ತ ಯೋಧ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Exit mobile version