ನವದೆಹಲಿ: ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು (No Confidence Motion) ಮಂಡಿಸಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ. ಅಲ್ಲದೆ, ಅವಿಶ್ವಾಸ ನಿರ್ಣಯದ ಕುರಿತು ಶೀಘ್ರದಲ್ಲೇ ಚರ್ಚಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳು 2023ರಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ಕುರಿತು 2019ರಲ್ಲೇ ಊಹಿಸಿದ್ದು, ಆ ವಿಡಿಯೊ ಈಗ ವೈರಲ್ ಆಗಿದೆ.
ಹೌದು, ನರೇಂದ್ರ ಮೋದಿ ಅವರು 2019ರಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ತೀಕ್ಷ್ಣ ನುಡಿಗಳ ಮೂಲಕ ಪ್ರತಿಪಕ್ಷಗಳಿಗೆ ಕುಟುಕಿದ್ದರು. “2023ರಲ್ಲಿ ಕೂಡ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಸಿದ್ಧಪಡಿಸಲಿ. ಆಗಲೂ ನೀವು ಅವಿಶ್ವಾಸ ಗೊತ್ತುವಳಿ ಮಂಡಿಸುವಂತಾಗಲಿ ಎಂಬುದಾಗಿ ನಾನು ಶುಭ ಕೋರುತ್ತೇನೆ” ಎಂದು ಮೋದಿ ಹೇಳಿದ್ದರು. ಈಗ 2023ರಲ್ಲೇ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದು, ಮೋದಿ ಅವರು 4 ವರ್ಷದ ಹಿಂದೆ ಹೇಳಿದ ವಿಡಿಯೊ ಸದ್ದು ಮಾಡುತ್ತಿದೆ.
2019ರಲ್ಲಿ ಮೋದಿ ಹೇಳಿದ್ದಿಷ್ಟು
Opposition is bringing a No confidence motion against government which PM Modi had predicted 5 years ago! pic.twitter.com/PBCaUe3fqG
— DD News (@DDNewslive) July 26, 2023
“ನೀವು 2023ರಲ್ಲೂ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಾಗಲಿ” ಎಂದು ನರೇಂದ್ರ ಮೋದಿ ಅವರು ಹೇಳುತ್ತಲೇ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. “ಇದು ಅಹಂಕಾರದ ಮಾತು” ಎಂದು ಖರ್ಗೆ ಕುಟುಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ಇದು ಸಮರ್ಪಣಾ ಮನೋಭಾವದ ಆತ್ಮವಿಶ್ವಾಸ ಆಗಿದೆಯೇ ಹೊರತು ಅಹಂಕಾರದ ಮಾತಲ್ಲ. ಅಹಂಕಾರ ಪ್ರದರ್ಶಿಸಿದ್ದಕ್ಕೆ ನೀವು (ಕಾಂಗ್ರೆಸ್) 400 ಸ್ಥಾನದಿಂದ 40 ಸ್ಥಾನಕ್ಕೆ ಇಳಿದಿದ್ದೀರಿ. ಸೇವಾ ಮನೋಭಾವದಿಂದ ನಾವು 2 ಸ್ಥಾನದಿಂದ ಬಂದು ಇಲ್ಲಿ ಕೂತಿದ್ದೇವೆ” ಎಂದು ಹೇಳಿದ್ದರು.
ಇದನ್ನೂ ಓದಿ: No Confidence Motion: ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಅಸ್ತು; ಸಂಖ್ಯಾಬಲ ಹೇಗಿದೆ? ಮುಂದೇನಾಗುತ್ತದೆ?
ಈಗ ಸಂಖ್ಯಾಬಲ ಹೇಗಿದೆ?
ಲೋಕಸಭೆಯ ಒಟ್ಟು ಸದಸ್ಯ ಬಲ 543 ಇದೆ. ಆರು ಸದಸ್ಯರ ಆಯ್ಕೆ ಬಾಕಿ ಇದ್ದು, ಸದ್ಯ 537 ಸದಸ್ಯರಿದ್ದಾರೆ. ಇವರಲ್ಲಿ ಬಿಜೆಪಿ ಒಂದೇ ಪಕ್ಷದ ಬಲವೇ 301 ಇದೆ. ಇನ್ನು ಎನ್‌ಡಿಎ ಮಿತ್ರಪಕ್ಷಗಳ ಬಲ ಸೇರಿ ಸಂಖ್ಯಾಬಲ 331 ಆಗುತ್ತದೆ. ಇನ್ನು ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದಲ್ಲಿ 142 ಸದಸ್ಯರಿದ್ದಾರೆ. ಆದಾಗ್ಯೂ, ಹಲವು ಪಕ್ಷಗಳ 33 ಸದಸ್ಯರು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅವರು ತಟಸ್ಥರಾಗಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.