ಉಜ್ಜಯಿನಿ: ಕರೆಂಟು ಹೋದ ಸಮಯದಲ್ಲಿ ನಡೆದ ಮದುವೆಯೊಂದು ಈಗ ದೇಶಾದ್ಯಂತ ಭರ್ಜರಿ ಸುದ್ದಿ ಮಾಡಿದೆ. ಕತ್ತಲಲ್ಲಿ ತಾಳಿಕಟ್ಟಿದ ವೇಳೆ ವಧು-ವರರು ಅದಲುಬದಲಾದ ವಿಚಿತ್ರ ಕತೆ ಇದು ! ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಅಸ್ಲಾನಾ ಎಂಬ ಗ್ರಾಮದಲ್ಲಿ ಸೋದರಿಯರ ಮದುವೆ ನಡೆಯುತ್ತಿತ್ತು. ರಮೇಶ್ ಲಾಲ್ ಎಂಬುವರ ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ವಧುಗಳು. ಇಲ್ಲಿ ನಿಕಿತಾಳಿಗೆ ದಂಗ್ವಾರಾ ಭೋಲಾ ಮತ್ತು ಕರಿಷ್ಮಾಳಿಗೆ ಗಣೇಶ್ ವರ. ಆದರೆ ಮದುವೆ ಮಧ್ಯದಲ್ಲಿ ಕರೆಂಟ್ ಹೋಗಿ ವಾಪಸ್ ಕರೆಂಟ್ ಬರುವಷ್ಟರಲ್ಲಿ ನಿಕಿತಾ ಗಣೇಶ್‌ನನ್ನು ಮದುವೆಯಾಗಿದ್ದರೆ, ಕರಿಷ್ಮಾಳಿಗೆ ದಂಗ್ವಾರಾ ಭೋಲಾ ತಾಳಿ ಕಟ್ಟಿದ್ದರು. ನಂತರ ಇದು ಕುಟುಂಬಗಳ ಮಧ್ಯೆ ಗಲಾಟೆಗೆ ಕಾರಣವಾಯಿತಾದರೂ, ಅಂತಿಮವಾಗಿ ರಾಜಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ |Explainer: ಶುರುವಾಗಿದೆ President Election ದಂಗಲ್
ರಾತ್ರಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಪದ್ಧತಿ ಆಚರಣೆಯ ಮಧ್ಯೆ ವಿದ್ಯುತ್ ಕಡಿತ ಉಂಟಾಗಿದೆ. ಎಷ್ಟೊತ್ತಾದರೂ ಕರೆಂಟ್ ಬರಲಿಲ್ಲ. ಇದೇ ವೇಳೆ ಮುಹೂರ್ತ ತಪ್ಪಿಸಬಾರದು ಎಂಬ ಕಾರಣಕ್ಕೆ ಕತ್ತಲಲ್ಲೇ ತಾಳಿ ಧಾರಣೆ ಕಾರ್ಯಕ್ರಮ ನಡೆದಿದೆ. ಆಮೇಲೆ ಕರೆಂಟ್ ಬಂದರೂ ಕೂಡ ವಧುಗಳಿಬ್ಬರೂ ಒಂದೇ ತರಹ ಅಲಂಕಾರ ಮಾಡಿಕೊಂಡಿದ್ದರಿಂದ ಅಷ್ಟು ಬೇಗ ಯಾರಿಗೂ ಗೊತ್ತಾಗಿಲ್ಲ. ಸಪ್ತಪದಿ, ಹೆಣ್ಣೊಪ್ಪಿಸುವ ಕಾರ್ಯಕ್ರಮಗಳೆಲ್ಲ ಸಹಜವಾಗಿಯೇ ನಡೆದಿವೆ. ಆದರೆ ಒಮ್ಮೆ ಮದುವೆಯೆಲ್ಲ ಮುಗಿದ ಬಳಿಕವಷ್ಟೇ ವಧು-ವರರು ಅದಲುಬದಲಾಗಿದ್ದು ತಿಳಿದಿದೆ.
ತಾಳಿಗೇ ಕಟ್ಟು ಬಿದ್ದ ಕುಟುಂಬಗಳು!
ವಿಷಯ ತಿಳಿದ ಹೆಣ್ಣಿನ ಕಡೆಯವರು ಮತ್ತು ಇಬ್ಬರೂ ವರರ ಕುಟುಂಬಗಳು ಒಮ್ಮೆ ಗೊಂದಲಕ್ಕೀಡಾದರೂ. ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಆದರೆ ತಾಳಿ ಕಟ್ಟಿಯಾದ ಮೇಲೆ ಇನ್ನೇನು ಮಾಡಲೂ ಸಾಧ್ಯವಿಲ್ಲ ಎಂದು ಅರಿತ ಕುಟುಂಬದವರು ಈ ವಿವಾಹವನ್ನು ಮಾನ್ಯ ಮಾಡಿದ್ದಾರೆ. ಮರುದಿನ ಎರಡೂ ಜೋಡಿಗಳಿಗೆ ಹೊಸದಾಗಿ ಮದುವೆ ಮಾಡಿ, ಆಶೀರ್ವದಿಸಿದ್ದಾರೆ.
ಇದನ್ನೂ ಓದಿ | Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು