Site icon Vistara News

Ujjwala Scheme: 75 ಲಕ್ಷ ಮನೆಗಳಿಗೆ ಉಚಿತ ಎಲ್‌ಪಿಜಿ ಕನೆಕ್ಷನ್;‌ 1,650 ಕೋಟಿ ರೂ. ನೀಡಿದ ಕೇಂದ್ರ

Ujjwala Scheme

Central Government extends Rs 300 LPG subsidy for Ujjwala beneficiaries for FY25

ನವದೆಹಲಿ: ಅಡುಗೆ ಅನಿಲ ಸಿಲಿಂಡರ್‌ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ ಇಳಿಸುವ ಮೂಲಕ ದೇಶದ ಜನರ ಹೊರೆ ಕಡಿಮೆ ಮಾಡಿದ ಕೇಂದ್ರ ಸರ್ಕಾರ ಈಗ ಮತ್ತೊಂದು ಘೋಷಣೆ ಮಾಡಿದೆ. ದೇಶದ 75 ಲಕ್ಷ ಮನೆಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ (Ujjwala Scheme) ಉಚಿತವಾಗಿ ಅಡುಗೆ ಅನಿಲ ಸಂಪರ್ಕಕ್ಕಾಗಿ 1,650 ಕೋಟಿ ರೂ. ಮೀಸಲಿಡಲು ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ (Union Cabinet) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ದೇಶಾದ್ಯಂತ ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೊಳಿಸಿದೆ. ಇದೇ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದೆ. ಈಗ ಉಜ್ವಲ ಯೋಜನೆ ಅನ್ವಯ ದೇಶದ 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಹೆಚ್ಚಿನ ಹಣ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಇಷ್ಟು ಮನೆಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವುದು ಕೇಂದ್ರದ ಗುರಿಯಾಗಿದೆ.

ಇದನ್ನೂ ಓದಿ: LPG Price: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯೂ ಭಾರಿ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ನೋಡಿ

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ ಬೆಲೆ 200 ರೂ. ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯನ್ನು 157 ರೂ. ಇಳಿಕೆ ಮಾಡಿತ್ತು. ಇದಕ್ಕೂ ಮೊದಲು ದೇಶದಲ್ಲಿ ಅಡುಗೆಗೆ ಬಳಸುವ ಒಂದು ಸಿಲಿಂಡರ್‌ ಬೆಲೆ 1,100 ರೂ. ಇತ್ತು. 200 ರೂ. ಬೆಲೆ ಇಳಿಕೆಯೊಂದಿಗೆ ಉಜ್ವಲ ಅಡಿಯಲ್ಲಿ ಒಂದು ಸಿಲಿಂಡರ್‌ಗೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯು 400 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ, 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕದ ಕುರಿತು ಕೂಡ ಕೇಂದ್ರ ಸರ್ಕಾರ ಘೋಷಿಸಿತ್ತು.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

ಲೋಕಸಭೆ ಚುನಾವಣೆಗೆ ರಣತಂತ್ರ?

ಮುಂದಿನ ವರ್ಷ ನಡೆಯುವ ಲೋಕಸಭೆ ಹಾಗೂ ವರ್ಷಾಂತ್ಯದಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬೆಲೆಯೇರಿಕೆಯು ಪ್ರಮುಖ ವಿಷಯವಾಗಿದೆ. ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಅವರು ಸಿಲಿಂಡರ್‌ ಬೆಲೆ ಇಳಿಕೆ ಮಾಡಿದ್ದಾರೆ. ಕಾಂಗ್ರೆಸ್‌ ಉಚಿತ ಕೊಡುಗೆಗಳ ಗ್ಯಾರಂಟಿಗಳನ್ನು ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ಸಿಲಿಂಡರ್‌ ಬೆಲೆ ಇಳಿಕೆ ಮೂಲಕ ಜನರ ಅಸಮಾಧಾನ ತಣಿಸಲು ನಿರ್ಧಾರ ತೆಗೆದುಕೊಂಡಿದೆ. ಈಗ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಹಣ ಮೀಸಲಿಟ್ಟಿದೆ.

ಪೆಟ್ರೋಲ್‌ ಬೆಲೆಯೂ ಇಳಿಕೆ?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ ಜತೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನೂ ಕಡಿಮೆ ಮಾಡಲಿದೆ ಎನ್ನಲಾಗುತ್ತಿದೆ. ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕವಾಗಿ ನೀಡುವ 6 ಸಾವಿರ ರೂ. ಸಹಾಯಧನದ ಮೊತ್ತವನ್ನು ಹೆಚ್ಚಿಸುವುದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿದುಬಂದಿದೆ.

Exit mobile version