Site icon Vistara News

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

allegations of rape honeytrap Mla Munirathna arrested again by Kaggalipura police as soon as he came out of jail

ಬೆಂಗಳೂರು: ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್‌ನಲ್ಲಿ ಜೈಲುಪಾಲಾಗಿದ್ದ ಶಾಸಕ ಮುನಿರತ್ನಗೆ (MLA Muniratna) ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿತ್ತು. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್‌ ಆಗಿ ಹೊರ ಬಂದಾತಕ್ಷಣ ಕಗ್ಗಲಿಪುರ ಪೊಲೀಸರು (Kaggalipura police) ಹಾಗೂ ಡಿವೈಎಸ್‌ಪಿ ದಿನಕರ್ ಶೆಟ್ಟಿ ಮುನಿರತ್ನರನ್ನು ವಶಕ್ಕೆ ಪಡೆದಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇನ್ನು ಅತ್ಯಾಚಾರ ಪ್ರಕರಣ ಸಂಬಂಧ ನಿನ್ನೆ ಗುರುವಾರ ಪೊಲೀಸರು ಸಂತ್ರಸ್ತೆಯನ್ನು ಕರೆದೊಯ್ದು ಕೃತ್ಯ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಮುತ್ಯಾಲನಗರದ ಗೋಡೌನ್, ನೆಲಮಂಗಲ ಬಳಿ ಮಹಜರು ಮಾಡಿ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿದ್ದಾರೆ.

ಏನಿದು ಪ್ರಕರಣ?

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೋವಿಡ್ ಸಮಯದಲ್ಲಿ ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಮುನಿರತ್ನ ಕರೆ ಮಾಡಿದ್ದರು. ಅದರಂತೆ ಭೇಟಿಯಾದ ಸಂತ್ರಸ್ತೆ ಹಾಗೂ ಮುನಿರತ್ನ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್‌ ಮೂಲಕ ಮಾತನಾಡುತ್ತಿದ್ದರು. ಹೀಗೊಂದು ದಿನ ನಗ್ನವಾಗಿ ವಿಡಿಯೊ ಕರೆ ಮಾಡುವಂತೆ ಒತ್ತಾಯಿಸಿದಾಗ ಸಂತ್ರಸ್ತೆ ನಿರಾಕರಿಸಿದ್ದರಂತೆ. ಇದಾದ ಬಳಿಕ ಸಂತ್ರಸ್ತೆಯನ್ನು ಗೋಡೌನ್‌ಗೆ ಕರೆಸಿಕೊಂಡು ನಿನ್ನ ನೋಡಿದರೆ ಮೈ ಜುಮ್‌ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾಗಿದ್ದರಂತೆ.

ಇದಕ್ಕೆ ಸಂತ್ರಸ್ತೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದಿದ್ದಾರೆ. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ನಾನು ಶಾಸಕ, ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ , ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರಂತೆ. ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವೀಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿದೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ಹೇಳಿದಂತೆ ಕೇಳಬೇಕು ಅಂತಾ ಹನಿಟ್ರ್ಯಾಪ್ ಮಾಡುವಂತೆ ಹೇಳಿ ನನ್ನನ್ನು ಬಳಸಿಕೊಂಡರು ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ತೋರಿಸುತ್ತಾ, 2020 ರಿಂದ 2022ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್‌ಗು ಬಳಕೆ ಮಾಡಿಕೊಂಡಿದ್ದಾರೆ. ಹೇಳಿದಂತೆ ಕೇಳಲಿಲ್ಲ ಅಂದರೆ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸೋದಾಗಿ ಬೆದರಿಕೆ ಹಾಕಿದ್ದಾರೆ. ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮರ್ಯಾದೆ ಹಾಗು ಪ್ರಾಣಕ್ಕೆ ಅಂಜಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವ್ಯಾವ ಸೆಕ್ಷನ್‌ನಡಿ ಕೇಸ್?

354A – ಲೈಂಗಿಕ ದೌರ್ಜನ್ಯ
354C – ಮಹಿಳೆಯರ ಇಚ್ಛೆಗೆ ವಿರುದ್ಧವಾಗಿ ಚಿತ್ರೀಕರಣ
376N(2) – ಸರ್ಕಾರಿ ಸೇವಕನಿಂದ ಅತ್ಯಾಚಾರ
506 – ಜೀವ ಬೆದರಿಕೆ
504 – ಉದ್ದೇಶಪೂರ್ವಕವಾಗಿ ನಿಂದನೆ
120(B) – ಅಪರಾಧಿಕ ಒಳಸಂಚು
149 -ಕಾನೂನು ಬಾಹಿರ ಸಭೆ
406 – ನಂಬಿಕೆ ದ್ರೋಹ
384 – ಸುಲಿಗೆ
308 – ಹತ್ಯೆ ಮಾಡಲು ಪ್ರಯತ್ನ, ಐಟಿ ಆಕ್ಟ್ 66,66e

ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್‌ ಮಾಡಿಸುತ್ತಿದ್ದನಂತೆ. ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್‌ ಮಾಡಿ ಅವರಿಗೆ ಏಡ್ಸ್‌ ಸೋಂಕಿತರ ರಕ್ತ ಇಂಜೆಕ್ಟ್‌ ಮಾಡಿಸುತ್ತಿದ್ದ ಎನ್ನಲಾಗಿದೆ. ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿ ಸ್ಥಳೀಯ ಕಾರ್ಪೋರೇಟರ್‌ಗಳನ್ನು ಸೈಲೆಂಟ್ ಮಾಡಿಸಿದ್ದು ಹೀಗೆ, ಅದರಲ್ಲಿ ಮಾಗಡಿ ಎಂಎಲ್‌ಎ ಸಹ ಒಬ್ಬರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್ಐಆರ್‌ನಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version