ಲಕ್ನೊ: ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೂ ಸೂಪರ್ ಜಯಂಟ್ಸ್ ತಂಡದ ಸ್ಪಿನ್ ಬೌಲರ್ ಗಮನ ಸೆಳೆದಿದ್ದಾರೆ. ಮೊದಲಾಗಿ ಅವರು ತಮ್ಮ ನಾಲ್ಕು ಓವರ್ಗಳ ಸ್ಪಿನ್ ಬೌಲಿಂಗ್ನಲ್ಲಿ 23 ರನ್ ನೀಡಿ ಮೂರು ವಿಕೆಟ್ ಕಬಳಿಸಿರುವುದಕ್ಕೆ. ಮತ್ತೊಂದು ಪ್ರಮುಖ ಕಾರಣ ಅವರ ಸೂಪರ್ ಮ್ಯಾನ್ ರೀತಿಯಲ್ಲಿ ಹಾರಿ ಹಿಡಿದ ಕ್ಯಾಚ್ಗಾಗಿ. ಯಾಕೆಂದರೆ 40 ವರ್ಷದ ಮಿಶ್ರಾ ಅವರು ಅಷ್ಟೊಂದು ಅಪಾಯಕಾರಿಯಾದ ಕ್ಯಾಚ್ ಹಿಡಿಯುದು ಸುಲಭವಾಗಿರಲಿಲ್ಲ.
ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಐದು ವಿಕೆಟ್ಗಳ ಹೀನಾಯ ಸೋಲಿಗೆ ಒಳಗಾಗಿದೆ. ಎಸ್ಆರ್ಎಚ್ ತಂಡದ ಬ್ಯಾಟರ್ಗಳೇ ಈ ಸೋಲಿಗೆ ಕಾರಣ. ಯಾರು ಕೂಡ ಪಂದ್ಯದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿಲ್ಲ. ಇದ್ದಿದ್ದರಲ್ಲಿ ಗರಿಷ್ಠ ರನ್ ಬಾರಿಸಿದ್ದು ರಾಹುಲ್ ತ್ರಿಪಾಠಿ ಮಾತ್ರ. 34 ರನ್ ಬಾರಿಸಿದ ಅವರು ತಂಡದ ಮೊತ್ತ 100 ಗಡಿ ದಾಟುವಲ್ಲಿ ನೆರವು ನೀಡಿದ್ದರು.
ಪಂದ್ಯದ 17.2ನೇ ಓವರ್ನಲ್ಲಿ ರಾಹುಲ್ ತ್ರಿಪಾಠಿ ವಿಕೆಟ್ ಹಿಂದಿನ ಮೂಲಕ ಬೌಂಡರಿ ಬಾರಿಸಲು ಯತ್ನಿಸಿದರು. ಈ ವೇಳೆ ಶಾರ್ಟ್ ಥರ್ಡ್ ಮ್ಯಾನ್ ಏರಿಯಾದಲ್ಲಿದ್ದ ಅಮಿತ್ ಮಿಶ್ರಾ ಓಡಿ ಹೋಗಿ ಹಾರಿ ಬಿದ್ದು ಕ್ಯಾಚ್ ಹಿಡಿದರು. ಅವರು ಹಿಡಿದ ಆ ಕ್ಯಾಚ್ ಹಿಡಿಯದೇ ಹೋಗಿದ್ದರೆ ತ್ರಿಪಾಠಿ ಕೊನೇ ಎರಡು ಓವರ್ಗಳಲ್ಲಿ ಬೌಂಡರಿ , ಸಿಕ್ಸರ್ಗಳ ಮಳೆ ಸುರಿಸಿ ತಂಡದ ಮೊತ್ತ ಏರಿಕೆ ಮಾಡುತ್ತಿದ್ದರು. ಆದರೆ, ಮಿಶ್ರಾ ಅದಕ್ಕೆ ಅವಕಾಶ ಕೊಡಲಿಲ್ಲ. ಈ ಮೂಲಕ ಅವರು ಎಲ್ಲರ ಪ್ರಶಂಸೆಗೆ ಕಾರಣರಾದರು.
ತಮಗೆ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಿಸಿಕೊಂಡಿರುವ ಅಮಿತ್ ಮಿಶ್ರಾ ಆ ಬಗ್ಗೆ ಟ್ವೀಟ್ ಮೂಲಕ ಧನ್ಯವಾದ ಕೋರಿದ್ದಾರೆ. ನನಗೆ ಅವಕಾಶ ನೀಡಿದ ಲಕ್ನೊ ತಂಡಕ್ಕೆ ಧನ್ಯವಾದಗಳು. ಈ ಟೂರ್ನಿಯಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ. ಗರಿಷ್ಠ ಪ್ರದರ್ಶನ ನೀಡುವ ಗುರಿ ನನ್ನದು. ನನಗೆ ನಿರಂತರ ಬೆಂಬಲ ನೀಡಿ ಎಂದು ಅವರು ಬರೆದುಕೊಂಡಿದ್ದಾರೆ.
ಅಮಿತ್ ಮಿಶ್ರಾ ಅವರು ಈ ಪಂದ್ಯದಲ್ಲಿ ಪಡೆದಿರುವುದು ತಮ್ಮ ಐಪಿಎಲ್ ಇತಿಹಾಸದ 167ನೇ ಹಾಗೂ 168ನೇ ವಿಕೆಟ್. ವಾಷಿಂಗ್ಟನ್ ಸುಂದರ್ ಹಾಗೂ ಆದಿಲ್ ರಶೀದ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ದರು.
ಪಂದ್ಯದ ಫಲಿತಾಂಶ ಏನು?
ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಮರ್ಥ ಪ್ರದರ್ಶನ ನೀಡಿದ ಲಕ್ನೊ ಸೂಪರ್ ಜಯಂಟ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ (IPL 2023) 10ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ವಿಕೆಟ್ ವಿಜಯ ಸಾಧಿಸಿತು. ಈ ಮೂಲಕ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 12 ರನ್ಗಳ ಸೋಲಿಗೆ ಸಮಾಧಾನ ಹೇಳಿಕೊಂಡಿತು. ಏತನ್ಮಧ್ಯೆ, ಸನ್ರೈಸರ್ಸ್ ಹೈದರಾಬಾದ್ ಬಳಗ ಹಾಲಿ ಆವೃತ್ತಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲಿಗೆ ಒಳಗಾಯಿತು. ಆಲ್ರೌಂಡ್ ಕೃಣಾಲ್ ಪಾಂಡ್ಯ ಬೌಲಿಂಗ್ನಲ್ಲಿ 18 ರನ್ ನೀಡಿ 3 ವಿಕೆಟ್ ಕಬಳಿಸುವ ಜತೆ ಬ್ಯಾಟಿಂಗ್ನಲ್ಲಿ 34 ರನ್ ಬಾರಿಸಿ ಲಕ್ನೊ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 121 ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ಬಳಗ 16 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್ ಬಾರಿಸಿ ಜಯಶಾಲಿಯಾಯಿತು.