ಅಹಮದಾಬಾದ್: ಇಂದೋರ್ ಟೆಸ್ಟ್ ಬಳಿಕ ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮಾ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಅವರು ಟೀಮ್ ಇಂಡಿಯಾ ಕ್ಯಾಂಪ್ ಸೇರಿದ್ದು, ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ(ಮಾರ್ಚ್ 9) ದಿಂದ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಭಾರತ ತಂಡದ ಆಟಗಾರರೆಲ್ಲ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾನುವಾರದಿಂದಲೇ ಅಭ್ಯಾಸ ಆರಂಭಿಸಿದ್ದರೂ, ವಿರಾಟ್ ಮತ್ತು ರೋಹಿತ್ ವಿಶ್ರಾಂತಿ ವಹಿಸಿ ಅಭ್ಯಾಸದಲ್ಲಿ ತೊಡಗಿಕೊಂಡಿರಲಿಲ್ಲ. ಇದೀಗ ಪಂದ್ಯ ಆರಂಭಕ್ಕೆ ಎರಡು ದಿನ ಬಾಕಿ ಇರುವಾಗ ಉಭಯ ಆಟಗಾರರು ಅಭ್ಯಾಸ ನಡೆಸಲು ಆರಂಭಿಸಿದ್ದಾರೆ.
ಮಂಗಳವಾರ ನೆಟ್ಸ್ನಲ್ಲಿ ಕೆಲ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದ ರೋಹಿತ್ ಮತ್ತು ವಿರಾಟ್ ಬಳಿಕ ಫೀಲ್ಡಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡರು. ಸದ್ಯ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಪಡೆಯಬೇಕಿದ್ದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಆಟಗಾರರೆಲ್ಲ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ IND VS AUS: ಅಹಮದಾಬಾದ್ ಟೆಸ್ಟ್ನಲ್ಲಿ ವೀಕ್ಷಕ ವಿವರಣೆ ಮಾಡಲಿದ್ದಾರೆ ಪ್ರಧಾನಿ ಮೋದಿ; ವರದಿ
ಆಟಗಾರರ ಅಭ್ಯಾಸದ ಮೇಲೆ ಕೋಚ್ ರಾಹುಲ್ ದ್ರಾವಿಡ್ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಮೂಲಕ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಲು ಅವರು ಪಣ ತೊಟ್ಟಂತೆ ಕಾಣಿಸುತ್ತಿದೆ. ರಾಹುಲ್ ಬದಲು ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದ ಶುಭಮನ್ ಗಿಲ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಶ್ರೇಯಸ್ ಅಯ್ಯರ್ ಅವರಿಗೆ ದ್ರಾವಿಡ್ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು ತಪ್ಪುಗಳನ್ನು ತಿದ್ದಿಕೊಳ್ಳುವ ಸಲಹೆಗಳನ್ನು ನೀಡಿದ್ದಾರೆ.