ಮುಂಬಯಿ: ಇದೇ ತಿಂಗಳಾಂತ್ಯದಲ್ಲಿ ಟಿ20 ಮತ್ತು ಏಕದಿನ ಸರಣಿಯನ್ನಾಡಲು ಟೀಮ್ ಇಂಡಿಯಾ ಶ್ರೀಲಂಕಾ(IND vs SL) ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಮೊಹಮ್ಮದ್ ಶಮಿ(Mohammed Shami) ಕೂಡ ಆಯ್ಕೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಶಮಿ ಅವರು ಈ ಸರಣಿಯಲ್ಲಿ ಆಡುವ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿಗೆ ಲಂಡನ್ನಲ್ಲಿ ಪಾದದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವಿಶ್ವಕಪ್ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಬೌಲಿಂಗ್ ಮತ್ತು ವ್ಯಾಯಾಮ ನಡೆಸುತ್ತಿರುವ ವಿಡಿಯೊವನ್ನು ಶಮಿ ಕೆಲವು ವಾರಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್ ಸೇರಿ ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ
ಶ್ರೀಲಂಕಾ ವಿರುದ್ಧ ಭಾರತ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾಗೆ ಬಿಸಿಸಿಐ ವಿಶ್ರಾಂತಿ ನೀಡ ಬಯಸಿದೆ ಎನ್ನಲಾಗಿದೆ. ಹೀಗಾಗಿ ಶಮಿ ಈ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.