Site icon Vistara News

IPL 2024: ಮೂರು ಕೋಟಿ ವಿದ್ಯುತ್ ಬಿಲ್‌ ಪಾವತಿ; ಚೆನ್ನೈ-ಹೈದರಾಬಾದ್​ ಪಂದ್ಯ ನಿರಾಳ

IPL 2024

ಹೈದರಾಬಾದ್: ಬರೋಬ್ಬರಿ 3 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇರಿಸಿದ ಕಾರಣದಿಂದ ರಾಜೀವ್​ಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ(IPL 2024) ಇಂದು ನಡೆಯಬೇಕಿದ್ದ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ನಡುವಿನ ಪಂದ್ಯ ಅನುಮಾನ ಎನ್ನಲಾಗಿತ್ತು. ವಿದ್ಯುತ್‌ ಬಿಲ್‌ ಬಾಕಿ ಇರಿಸಿಕೊಂಡಿದ್ದರಿಂದ ಕ್ರೀಡಾಂಗಣಕ್ಕೆ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಇದೀಗ ಇಲ್ಲಿನ ಕ್ರಿಕೆಟ್​ ಮಂಡಳಿ ಬಾಕಿ ಇರುವ 3 ಕೋಟಿ ವಿದ್ಯುತ್‌ ಬಿಲ್‌ ಪಾವತಿ ಮಾಡಿದೆ. ಹೀಗಾಗಿ ಪಂದ್ಯ ಸರಾಗವಾಗಿ ನಡೆಯಲಿದೆ.

ಬಿಲ್‌ ಪಾವತಿಸುವಂತೆ ಇಲ್ಲಿನ ಸರ್ಕಾರ ಹಲವು ಬಾರಿ ಕ್ರಿಕೆಟ್​ ಮಂಡಳಿಗೆ ಎಚ್ಚರಿಕೆ ನೀಡಿತ್ತು. ಆದರೂ ಕೂಡ ಬಿಲ್​ ಕಟ್ಟಿರಲಿಲ್ಲ. ಇನ್ನೇನು ಇಲ್ಲಿ ನಡೆಯಬೇಕಿದ್ದ ಐಪಿಎಲ್​ ಪಂದ್ಯಕ್ಕೂ 2 ದಿನ ಮುಂಚಿತವಾಗಿ ಸ್ಟೇಡಿಯಂನ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ​ತಕ್ಷಣ ಎಚ್ಚೆತ್ತುಕೊಂಡ ಕ್ರಿಕೆಟ್​ ಮಂಡಳಿ ಎಲ್ಲ ಬಾಕಿ ಮೊತ್ತವನ್ನು ಪಾವತಿ ಮಾಡಿದೆ. ಬಿಲ್‌ ಪಾವತಿ ಮಾಡಿದ್ದರಿಂದ ಕ್ರೀಡಾಂಗಣಕ್ಕೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ ಎಂದು ತೆಲಂಗಾಣ ವಿದ್ಯುತ್‌ ಸರಬರಾಜು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಇದ್ದ ಆತಂಕ ದೂರವಾಗಿದೆ.

ಚೆನ್ನೈ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದರೆ, ಸನ್​ರೈಸರ್ಸ್ 3 ಪಂದ್ಯಗಳಿಂದ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಇದೀಗ ತವರಿನ ಪಂದ್ಯದಲ್ಲಿ ಗೆದ್ದು ಮತ್ತೆ ಗೆಲುವಿನ ಹಳಿ ಏರುವ ವಿಶ್ವಾಸದಲ್ಲಿದೆ. ಚೆನ್ನೈ ತವರಿನಾಚೆ ಆಡಿದ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ, ಈ ಪಂದ್ಯದಲ್ಲಿ ಏನು ಮಾಡಲಿದೆ ಎಂದು ಕಾದು ನೋಡಬೇಕಿದೆ.

ಹೈದರಾಬಾದ್​ ತಂಡದ ಬೌಲಿಂಗ್​ ಸುಧಾರಣೆ ಕಾಣದೆ ಹೋದರೆ ತಂಡಕ್ಕೆ ಗೆಲುವು ಕಷ್ಟ ಸಾಧ್ಯ. ಕೇವಲ ಬ್ಯಾಟಿಂಗ್​ ನೆಚ್ಚಿಕೊಂಡು ಎಲ್ಲ ಪಂದ್ಯ ಗೆಲ್ಲುವುದು ಕಷ್ಟ. ಹೀಗಾಗಿ ಅನುಭವಿ ಭುವನೇಶ್ವರ್​ ಕುಮಾರ್​, ನಾಯಕ ಪ್ಯಾಟ್​ ಕಮಿನ್ಸ್, ಉನಾದ್ಕತ್​​ ಮತ್ತು ಟಿ.ನಟರಾಜನ್​ ಅವರು ತಮ್ಮ ಎಸೆತಗಳಿಗೆ ರನ್​ ಕಡಿವಾಣ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ. ದಕ್ಷಿಣ ಆಫ್ರಿಕಾದ ಸ್ಟಾರ್​ ವೇಗಿ ಮಾರ್ಕೊ ಜಾನ್ಸೆನ್​ ಅವರನ್ನು ಮೊದಲ ಪಂದ್ಯ ಆಡಿಸಿ ಆ ಬಳಿಕ 2 ಪಂದ್ಯಗಳಿಂದ ಹಿರಗಿಡಲಾಗಿತ್ತು. ಈ ಪಂದ್ಯದಲ್ಲಿ ಮತ್ತೆ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

​ಚೆನ್ನೈ ತಂಡ ಕಳೆದ ಪಂದ್ಯದಲ್ಲಿ ಸೋಲು ಕಂಡಿತ್ತು ಎಂದ ಮಾತ್ರಕ್ಕೆ ಈ ಸವಾಲನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಂಡದಲ್ಲಿ ಬಲಿಷ್ಠ ಆಟಗಾರರ ಪಡೆಯೇ ಇದೆ. ಇವರೆಲ್ಲ ಯಾವುದೇ ಹಂತದಲ್ಲಿ ಸಿಡಿದು ನಿಲ್ಲಬಲ್ಲರು. ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದಿರುವ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್​ ರೆಹಮಾನ್​ ಅವರು ಟಿ20 ವಿಶ್ವಕಪ್​ ಆಡಲು ವೀಸಾ ಸಂಬಂಧಿತ ತುರ್ತು ಕೆಲಸಕ್ಕಾಗಿ ತವರಿಗೆ ಮರಳಿದ್ದಾರೆ. ಹೀಗಾಗಿ ಅವರು ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದು ಚೆನ್ನೈಗೆ ಕೊಂಚ ಮಟ್ಟಿನ ಹಿನ್ನಡೆಯಾಗಿ ಪರಿಣಮಿಸಬಹುದು.

ಇದನ್ನೂ ಓದಿ IPL 2024: ಗೆಲುವಿನೊಂದಿಗೆ ದಾಖಲೆ ಬರೆದ ಪಂಜಾಬ್​ ಕಿಂಗ್ಸ್​; ಮುಂಬೈ ರೆಕಾರ್ಟ್​ ಬ್ರೇಕ್​

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 19 ಪಂದ್ಯಗಳನ್ನು ಆಡಿವೆ. ಇದರಲ್ಲಿ ಚೆನ್ನೈ ಗರಿಷ್ಠ 14 ಪಂದ್ಯ ಗೆದ್ದರೆ, ಹೈದರಾಬಾದ್​ ಕೇವಲ 5 ಪಂದ್ಯ ಮಾತ್ರ ಗೆದ್ದಿದೆ. ಕಳೆದ ಆವೃತ್ತಿಯಲ್ಲಿಯೂ ಚೆನ್ನೈ ತಂಡವೇ ಗೆದ್ದು ಬೀಗಿತ್ತು. ಬಲಾಬಲದ ಲೆಕ್ಕಾಚಾರ ನೋಡುವಾಗ ಚೆನ್ನೈ ತಂಡವೇ ಗೆಲ್ಲುವ ಫೇವರಿಟ್​ ಆಗಿ ಗೋಚರಿಸಿದೆ.

Exit mobile version