Site icon Vistara News

IPL 2024: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರು ಬಳಕೆ; ವರದಿ ಕೇಳಿದ ಎನ್‌ಜಿಟಿ

M Chinnaswamy Stadium

ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ(bangalore water crisis) ಹಿನ್ನೆಲೆ ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ನಡೆಯುವ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಈ ವೇಳೆ ಕೆಎಸ್​ಸಿಎ ಆಡಳಿತ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದ ನೀರು ಬಳಕೆ ಮಾಡುಲಾಗುತ್ತದೆ ಎಂದು ಹೇಳಿ ಪಂದ್ಯವಾವಳಿಯನ್ನು ನಡೆಸಿತ್ತು. ಇದೀಗ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವರದಿ ಕೇಳಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನಡೆಸಲು ಸುಮಾರು 60 ಸಾವಿರದಿಂದ 70 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಪ್ರತಿ ನಿತ್ಯ ನಿರ್ವಹಣೆಗೂ ಸಾವಿರಾರು ಲೀಟರ್‌ ನೀರು ಬೇಕೇ ಬೇಕು. ಮತ್ತೊಂದೆಡೆ ನಗರದಲ್ಲಿ ನೀರಿನ ಅಭಾವವಾಗಿ ಸರಬರಾಜು ವ್ಯತ್ಯಯವಾಗುತ್ತಿದೆ. ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್‌ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.

ಈ ವೇಳೆ ಸ್ಪಷ್ಟನೆ ನೀಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್, ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್‌ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ IPL 2024: ಅಂದು ಹರಾಜಿನಲ್ಲಿ ಆದ ಪ್ರಮಾದ ಇಂದು ಪಂಜಾಬ್ ತಂಡಕ್ಕೆ ವರದಾನ

ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರು ಐಪಿಎಲ್​ ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಆದೇಶಿಸಿದೆ.

ಮಾಧ್ಯಮಗಳ ವರದಿಗಳ ಆಧಾರದಲ್ಲಿ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಎ.ಸೆಂಥೊಲ್‌ ವೇಲ್ ಅವರನ್ನು ಒಳಗೊಂಡ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮನವಿಯ ಆಧಾರದಲ್ಲಿ ಕಬ್ಬನ್‌ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ.

ಮೇ 2ಕ್ಕೆ ವಿಚಾರಣೆ


ಸ್ಟೇಡಿಯಂಗೆ ಸರಬರಾಜು ಮಾಡುವ ನೀರಿನ ಗುಣಮಟ್ಟ ಮತ್ತು ಕ್ರೀಡಾಂಗಣದಲ್ಲಿ ಬಳಸಿದ ಅಂತರ್ಜಲದ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಜಲಮಂಡಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಮೇ 2ಕ್ಕೆ ಮುಂದೂಡಲಾಗಿದೆ. ಒಂದೊಮ್ಮೆ ಯೋಗ್ಯವಾದ ನೀರನ್ನು ಬಳಸಿದ್ದೇ ಆದ್ದಲ್ಲಿ ಇನ್ನುಳಿದ ಪಂದ್ಯಗಳ ಆತಿಥ್ಯ ಕಳೆದುಕೊಳ್ಳಬಹುದು.

Exit mobile version