ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ವೆಸ್ಟ್ ಇಂಡೀಸ್ನ ರೋಮನ್ ಪೊವೆಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 7.40 ಕೋಟಿ ರೂ. ನೀಡಿ ಖರೀದಿಸಿದೆ. ಅವರ ಮೂಲಬೆಲೆ 1 ಕೋಟಿ ಆಗಿತ್ತು. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ಬಿಡ್ಡಿಂಗ್ ಕಾರ್ಯ ಆರಂಭಿಸಿದ ಮಲ್ಲಿಕಾ ಸಾಗರ್. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಇದೇ ಮೊದಲ ಬಾರಿ. ಈ ಹಿಂದೆ ಹರಾಜುದಾರರಾಗಿದ್ದ ಹಗ್ ಎಡ್ಮೀಡ್ಸ್ ಬದಲಿಗೆ ಮಲ್ಲಿಕಾ ಆಯ್ಕೆಯಾಗಿದ್ದಾರೆ.
ಎಲ್ಲ ಫ್ರಾಂಚೈಸಿಗಳ ಅಧಿಕಾರಿಗಳನ್ನು ಪರಿಚಯಿಸುತ್ತಿರುವ IPL ಅಧ್ಯಕ್ಷ ಅರುಣ್ ಧುಮಾಲ್
ನಬಿ ಅತ್ಯಂತ ಹಿರಿಯ ಆಟಗಾರ
ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ ಆಟಗಾರನೆಂದರೆ ಮೊಹಮ್ಮದ್ ನಬಿ. ಅವರಿಗೆ 38 ವರ್ಷ. ಅನುಭವಿ ಆಲ್ರೌಂಡರ್ ಆಗಿರುವ ನಬಿಗೆ ಈ ಬಾರಿಯ ಹರಾಜಿನಲ್ಲಿ 1.5 ಕೋಟಿ ಮೂಲಬೆಲೆ ನಿಗದಿ ಮಾಡಲಾಗಿದೆ. ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ ಅನುಭವ ಹೊಂದಿದ್ದಾರೆ. ಒಟ್ಟಾರೆಯಾಗಿ ಅವರು ಇದುವರೆಗೆ 17 ಐಪಿಎಲ್ ಪಂದ್ಯ ಆಡಿ 180 ರನ್ ಮತ್ತು 13 ವಿಕೆಟ್ ಕಡೆವಿದ್ದಾರೆ. ಇದರಲ್ಲಿ 11 ರನ್ಗೆ 4 ವಿಕೆಟ್ ಉರುಳಿಸಿದ್ದು ಅವರ ವೈಯಕ್ತಿಕ ಸಾಧನೆಯಾಗಿದೆ.
ಘಜನ್ಫರ್ ಕಿರಿಯ ಆಟಗಾರ
ಅಫಘಾನಿಸ್ತಾನದ 16 ವರ್ಷದ ಸ್ಪಿನ್ನರ್ ಅಲ್ಲಾ ಮೊಹಮ್ಮದ್ ಘಜನ್ಫರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ. 15 ಜುಲೈ 2007 ರಂದು ಜನಿಸಿದ ಘಜನ್ಫರ್ ಇದುವರೆಗಿನ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಕೇವಲ 4 ಲಿಸ್ಟ್ ‘ಎ’ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾನೆ. ಕಿರಿಯ ವಯಸ್ಸಿನಲ್ಲಿಯೇ ಅವರು ಮಿಸ್ ಐನಾಕ್ ನೈಟ್ಸ್ ಮತ್ತು ಟೀಮ್ ಅಬುಧಾಬಿಗಾಗಿ ಆಡಿದ ಕೀರ್ತಿ ಹೊಂದಿದ್ದಾರೆ. ಅಫ್ಘಾನಿಸ್ತಾನದ ಪರ ಜೂನಿಯರ್ ಏಕದಿನ ಟೂರ್ನಿಯಲ್ಲೂ ಆಡಿದ್ದಾನೆ. ಇದೇ ವರ್ಷ ನಡೆದಿದ್ದ ವಜೀರ್ ಮೊಹಮ್ಮದ್ ಅಕ್ಬರ್ ಖಾನ್ ಪ್ರಾಂತೀಯ ಗ್ರೇಡ್ 1 ಏಕದಿನ ಪಂದ್ಯಾವಳಿಯಲ್ಲಿ ಕಾಬೂಲ್ ಪ್ರಾಂತ್ಯದ ಪರವಾಗಿ ಕಣಕ್ಕಿಳಿದಿದ್ದ. ಲಿಸ್ಟ್ ಎ ಟೂರ್ನಿಯಲ್ಲಿ ಒಟ್ಟು 4 ಮತ್ತು ಟಿ20 ಕ್ರಿಕೆಟ್ನಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾನೆ.