Site icon Vistara News

Paris Olympics Archery: ಪ್ರೀ-ಕ್ವಾರ್ಟರ್‌ ಫೈನಲ್​ಗೇರಿದ ದೀಪಿಕಾ ಕುಮಾರಿ

Paris Olympics Archery

Paris Olympics Archery: Deepika Kumari reaches Round of 16 in women’s individual event

ಪ್ಯಾರಿಸ್​: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಭಾರತದ ಸ್ಟಾರ್‌ ಬಿಲ್ಗಾರ್ತಿ ದೀಪಿಕಾ ಕುಮಾರಿ(Deepika Kumari) ಅವರು ಪ್ರೀ-ಕ್ವಾರ್ಟರ್​ ಫೈನಲ್(Paris Olympics Archery)​ ಪ್ರವೇಶಿಸುವ ಮೂಲಕ ತಮ್ಮ ಪದಕದ ಆಸೆಯನ್ನು ಜೀವಂತವಿರಿಸಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ ನಡೆದಿದ್ದ ಮಹಿಳೆಯರ ರೀಕರ್ವ್ ವೈಯಕ್ತಿಕ ವಿಭಾಗದದಲ್ಲಿ ಭಜನ್ ಕೌರ್(Bhajan Kaur) ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಸದ್ಯ ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತಕ್ಕೆ ಇಬ್ಬರು ಬಿಲ್ಗಾರ್ತಿಯರು ಪದಕ ಭರವಸೆ ಮೂಡಿಸಿದಂತಾಗಿದೆ.

ಬುಧವಾರ ನಡೆದ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್‌ ಸುತ್ತಿನ ಮೊದಲ ಪಂದ್ಯದಲ್ಲಿ ದೀಪಿಕಾ ಅವರು ಎಸ್ಟೋನಿಯಾದ ರೀನಾ ಪರ್ನಾಟ್‌ ವಿರುದ್ಧ 6-5(29-28, 26-27, 27-27, 24-27, 30-27) ಅಂತರದಿಂದ ಗೆದ್ದು ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು. ಆ ಬಳಿಕ ನಡೆದ 2ನೇ ಸುತ್ತಿನಲ್ಲಿ ನೆದರ್ಲ್ಯಾಂಡ್ಸ್​ನ ಕ್ವಿಂಟಿ ರೋಫೆನ್ ಅವರನ್ನು 6-2 ಅಂತರದಿಂದ ಮಣಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾದ ಆಟಗಾರ್ತಿಯ ವಿರುದ್ಧ ದೀಪಿಕಾ ಸೋಲನುಭವಿಸಿ ನಿರಾಸೆ ಎದುರಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲಿ, ರಿಯೋ ಒಲಿಂಪಿಕ್ಸ್​ನಲ್ಲಿ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ್ದರು. ಆದರೆ, ಈ ಬಾರಿ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.

ದೀಪಿಕಾ ಅವರು ಪ್ರೀ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವದ 13 ಶ್ರೇಯಾಂಕದ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರ ಸವಾಲು ಎದುರಿಸಲಿದ್ದಾರೆ. ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಸೆಣಸಾಡಲಿದ್ದಾರೆ.

ಮಂಗಳವಾರ ನಡೆದಿದ್ದ ಮಹಿಳೆಯರ ರೀಕರ್ವ್ ವೈಯಕ್ತಿಕ ವಿಭಾಗದದಲ್ಲಿ 18 ವರ್ಷದ ಭಜನ್ ಕೌರ್ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಕಮಲ್ ಸೈಫಾ ವಿರುದ್ದ 7-3 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ, ಆ ಬಳಿಕ ನಡೆದ 2ನೇ ಸುತ್ತಿನಲ್ಲಿ ಪೋಲೆಂಡ್‌ನ ಮೈಜೊರ್ ರನ್ನು 6-0ರಲ್ಲಿ ಮಣಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿದ್ದರು.

ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌


ವಿಶ್ವ ಚಾಂಪಿಯನ್‌, ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ(Paris Olympics Boxing) ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಇಂದು(ಬುಧವಾರ) ನಡೆದ 75 ಕೆ.ಜಿ. ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

ಏಕಮುಖವಾಗಿ ಸಾಗಿದ ಈ ಹೋರಾಟದಲ್ಲಿ ಭಾರತೀಯ ಬಾಕ್ಸರ್​ ಮುಂದೆ ನಾರ್ವೆಯ ಪ್ರತಿಸ್ಪರ್ಧಿ ಸಂಪೂರ್ಣ ಶರಣಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲಿ ವಿರುದ್ಧ ಲವ್ಲೀನಾ ಸೋಲು ಕಂಡಿದ್ದರು. ಕ್ವಾರ್ಟರ್​ ಫೈನಲ್​ ಪಂದ್ಯ ಆಗಸ್ಟ್ 4 ರಂದು ನಡೆಯಲಿದೆ. ಇಲ್ಲಿ ಗೆದ್ದರೆ ಪದಕವೊಂದು ಖಾತ್ರಿಯಾಗಲಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

Exit mobile version