ಬೆಂಗಳೂರು: ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ತವರಿನ ಅಭಿಮಾನಿಗಳು ಕಾತದಿಂದ ಕಾದು ಕುಳಿತಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗಾಗಿಯೇ ನಮ್ಮ ಮೆಟ್ರೋ(namma metro) ಕೂಡ ವಿಶೇಷ ರೈಲು ಸೇವೆಯನ್ನು ನೀಡಲಿದೆ.
ಕ್ರಿಕೆಟ್ ಪಂದ್ಯ ನೋಡಲು ಬರುವ ಕ್ರಿಕೆಟ್ ಪ್ರೇಮಿಗಳಿಗಾಗಿ ಮೆಟ್ರೋ ರೈಲು ಮತ್ತು ಬಿಎಂಟಿಸಿ ವಿಶೇಷ ಓಡಾಟಕ್ಕೆ ಅನುಮತಿ ನೀಡಿವೆ. ಹೀಗಾಗಿ ಕ್ರಿಕೆಟ್ ನೋಡಲು ಬರುವವರು, ಕ್ರೀಡಾಂಗಣ ತಲುಪುವ ವಿಚಾರದಲ್ಲಿ ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.
ಪೇಪರ್ ಟಿಕೆಟ್ ಮಾರಾಟ
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.
ಎಂದಿನಂತೆ, ಕ್ಯೂಆರ್ (QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.
ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮೇ 4ರ ಸಂಜೆವರೆಗೆ ಮಳೆ ಬರುವ ಮುನ್ಸೂಚನೆ ಇದೆಯಾದರೂ ಆಟವನ್ನೇ ನಿಲ್ಲಿಸುವಷ್ಟು ಜೋರಾಗಿ ಬರುವ ಸಾಧ್ಯತೆ ಇಲ್ಲ. ಸಣ್ಣಗೆ ತುಂತುರು ಮಳೆ ಬರಲೂಬಹುದು. ಹೀಗೆ ಸ್ವಲ್ಪ ಹೊತ್ತು ಮಳೆ ಬಂದರೂ ಬೇಗನೆ ಅದರ ಪರಿಣಾಮಗಳನ್ನು ನಿವಾರಿಸಿ ಆಟಕ್ಕೆ ಅಣಿ ಮಾಡುವ ತಂತ್ರಜ್ಞಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ.
ಇದನ್ನೂ ಓದಿ RCB vs GT: ಮಳೆ ಭೀತಿಯ ಮಧ್ಯೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಆರ್ಸಿಬಿ
ಪಾರ್ಕಿಂಗ್ ವ್ಯವಸ್ಥೆ
ಚಿನ್ನಸ್ವಾಮಿ ಕ್ರೀಡಾಂಗಣದತ್ತ ವಾಹನಗಳ ದಂಡೇ ಬರುವುದರಿಂದ ಕೆಲವು ಕಡೆ ಪಾರ್ಕಿಂಗ್ ನಿಷೇಧಿಸಲಾಗಿದೆ. ಇನ್ನು ಕೆಲವು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೇ 4ರಂದು ಸಂಜೆ ನಾಲ್ಕರಿಂದ ರಾತ್ರಿ 11ರವರೆಗಿನ ಮಾರ್ಗಸೂಚಿ ಇಲ್ಲಿದೆ.
ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿರ್ಬಂಧ
ಕ್ವೀನ್ಸ್ ರೋಡ್, ಎಂಜಿ ರೋಡ್‌ನಿಂದ ಕಬ್ಬನ್ ಪಾರ್ಕ್ ರಸ್ತೆ, ರಾಜಭವನ್ ರೋಡ್-ಸೆಂಟ್ರಲ್ ಸ್ಟ್ರೀಟ್ ರೋಡ್, ಕಬ್ಬನ್ ರಸ್ತೆ, ಸೈಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರೋಡ್, ಕಸ್ತೂರ್ಬಾ ರೋಡ್, ಅಂಬೇಡ್ಕರ್ ವೀದಿ, ಟ್ರಿನಿಟಿ, ಲಾವೆಲ್ಲೆ ರೋಡ್, ವಿಠಲ್ ಮಲ್ಯ ರೋಡ್, ನೃಪತುಂಗ ರಸ್ತೆ
ಪಾರ್ಕಿಂಗ್‌ಗೆ ಎಲ್ಲೆಲ್ಲಿ ವ್ಯವಸ್ಥೆ
ಕಿಂಗ್ಸ್ ರೋಡ್, ಯುಬಿ ಸಿಟಿ ಪಾರ್ಕಿಂಗ್, ಬಿಎಂಟಿಸಿ ಟಿಟಿಎಂಸಿ ಶಿವಾಜಿ ನಗರ್ ಫಸ್ಟ್ ಫ್ಲೋರ್, ಹಳೆ ಕೆಜಿಐಡಿ ಬಿಲ್ಡಿಂಗ್, ಮೆಟ್ರೋ ಲೇನ್ ಕೆಳಗಿನ ಬಿಆರ್‌ವಿ ಗ್ರೌಂಡ್