ಬೆಂಗಳೂರು: ಎಲ್ಲ ಸೆಗ್ಮೆಂಟ್ಗಳಲ್ಲಿ ಕಾರುಗಳನ್ನು ಮಾರುಕಟ್ಟೆಗೆ ಇಳಿಸುವ ಮೂಲಕ ಟಾಟಾ ಮೋಟಾರ್ಸ್ ಭಾರತದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕಾಂಪಾಕ್ಟ್ ಹ್ಯಾಚ್ಬ್ಯಾಕ್ನಿಂದ ಹಿಡಿದು ಫುಲ್ ಸೈಜ್ ಎಸ್ಯುವಿ ತನಕ ಟಾಟಾ ಮೋಟಾರ್ಸ್ನ ಕಾರುಗಳಿವೆ. ಇದೀಗ ಅದೇ ತಂತ್ರವನ್ನು ಭಾರತದ ಉಳಿದ ಕಂಪನಿಗಳು ಅಳವಡಿಸಿಕೊಳ್ಳುತ್ತಿವೆ. ಅಂತೆಯೇ ಕೊರಿಯಾ ಮೂಲದ ಕಂಪನಿಯಾಗಿರುವ ಹ್ಯುಂಡೈ (Hyundai Car) ಎಲ್ಲ ಸೆಗ್ಮೆಂಟ್ಗಳಲ್ಲಿ ಕಾರುಗಳನ್ನು ಬಿಡಲು ಆರಂಭಿಸಿದ್ದು, ಇದೀಗ ಕಾಂಪಾಕ್ಟ್ ಎಸ್ಯುವಿ ಸೆಗ್ಮೆಂಟ್ನಲ್ಲೊಂದು ಕಾರನ್ನು ರಸ್ತೆಗಳಿಸುವ ಸೂಚನೆ ಕೊಟ್ಟಿದೆ. ಈ ಕಾರು ಟಾಟಾ ಮೋಟಾರ್ಸ್ನ ಪಂಚ್ಗೆ ಸ್ಪರ್ಧೆಯೊಡ್ಡಲಿದೆ ಎಂದು ನಿರೀಕ್ಷಿಸಲಾಗಿದೆ. ಪಂಚ್ ಕಾರು 2021ರಲ್ಲಿ ಬಿಡುಗಡೆಯಾದ ಬಳಿಕ ಉತ್ತಮ ಸ್ಪಂದನೆ ಪಡೆದುಕೊಂಡಿತ್ತು.
ಇದು ಹ್ಯುಂಡೈನ ಗ್ರಾಂಡ್ ಐ10 ಪ್ಲಾಟ್ಫಾರ್ಮ್ನಲ್ಲಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ಎಐ3 ಎಂದು ಹೆಸರಿಡುವ ಸಾಧ್ಯತೆಗಳಿವೆ. ದಕ್ಷಿಣ ಕೊರಿಯಾದ ರಸ್ತೆಯಲ್ಲಿರುವ ಹ್ಯುಂಡೈ ಕಾಸ್ಪರ್ನ ಪ್ರತಿರೂಪ ಎಂದು ಹೇಳಲಾಗುತ್ತಿದೆ. ಇದು ಹ್ಯುಂಡೈ ವೆನ್ಯು ಹಾಗೂ ಐ10ಗಿಂತ ಮಧ್ಯದಲ್ಲಿ ದೊರೆಯುವ ಕಾರು ಎನಿಸಿಕೊಳ್ಳಲಿದೆ.
ಹೊಸ ಎಐ3 ಕಾರು 1.2 ಲೀಟರ್ನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಹ್ಯುಂಡೈನ ಗ್ರ್ಯಾಂಡ್ ಐ10, ಐ20 ಹಾಗೂ ಔರಾ ಕಾರಿನಲ್ಲಿ ಇದೇ ಎಂಜಿನ್ ಇದೆ. ಇದು 82 ಬಿಎಚ್ಪಿ ಪವರ್ ಹಾಗೂ 113 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್ನ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳು ಸಿಗಲಿವೆ.
ಹೊಸ ಎಐ3 ಕಾರು ಕಾಂಪಾಕ್ಟ್ ಎಸ್ಯುವಿಯಾಗಿರುವ ಜತೆಗೆ ಸುರಕ್ಷತೆಯ ವಿಚಾರದಲ್ಲೂ ಮೇಲುಗೈ ಸಾಧಿಸುವ ಪ್ರಯತ್ನ ಮಾಡಲಿದೆ. ಆರಂಭಿಕ ಹಂತದ ಅಡಾಸ್ ತಾಂತ್ರಿಕತೆಯನ್ನೂ ಹೊಂದಿರುವ ಸಾಧ್ಯತೆಗಳಿವೆ. ಹಾಗಾದರೆ ಮಾತ್ರ ಅತಿ ಹೆಚ್ಚು ಪ್ರಯಾಣಿಕರ ಸುರಕ್ಷತೆಯನ್ನು ಹೊಂದಿರುವ ಟಾಟಾ ಮೋಟಾರ್ಸ್ನ ಪಂಚ್ಗೆ ಪೈಪೋಟಿ ನೀಡಲು ಸಾಧ್ಯವಿದೆ.
2022-23ರಲ್ಲಿ 38 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟ, 27% ಏರಿಕೆ
ಭಾರತದಲ್ಲಿ ಕಳೆದ 2022-23ರಲ್ಲಿ 38.89 ಲಕ್ಷ ವಾಹನಗಳು ಮಾರಾಟವಾಗಿವೆ. 2021-22ರ ಸಾಲಿಗೆ ಹೋಲಿಸಿದರೆ 27% ಏರಿಕೆ ದಾಖಲಿಸಿದೆ. (Passenger Vehicle sales) ಆಗ 30.69 ಲಕ್ಷ ವಾಹನಗಳು ಮಾರಾಟವಾಗಿತ್ತು ಎಂದು ಆಟೊಮೊಬೈಲ್ ಡೀಲರ್‌ಗಳ ಒಕ್ಕೂಟ ಎಫ್‌ಎಡಿಎ ತಿಳಿಸಿದೆ. (Federation of automobile dealers associations) ಈ ಹಿಂದೆ 2018-19ರಲ್ಲಿ 32 ಲಕ್ಷ ವಾಹನಗಳು ಮಾರಾಟವಾಗಿತ್ತು.
ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿರುವುದರಿಂದ 2022-23ರಲ್ಲಿ ವಾಹನಗಳ ಮಾರಾಟದಲ್ಲಿ ಗಣನೀಯ ಚೇತರಿಕೆ ಉಂಟಾಗಿತ್ತು. ಹೊಸ ಮಾದರಿಯ ವಾಹನಗಳೂ ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಯಾಗಿತ್ತು ಎಂದು ಒಕ್ಕೂಟದ ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ದ್ವಿಚಕ್ರವಾಹನಗಳ ನೋಂದಣಿ 12%, ತ್ರಿ ಚಕ್ರ ವಾಹನಗಳ ನೋಂದಣಿ 69%, ಪ್ರಯಾಣಿಕರ ವಾಹನ ಮಾರಾಟದಲ್ಲಿ 14% ಹೆಚ್ಚಳ ದಾಖಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಈಗಲೂ ವಾಹನಗಳ ಮಾರಾಟ ಒತ್ತಡದಲ್ಲಿದೆ. ಹಣದುಬ್ಬರ ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಮಾರುತಿ ಸುಜುಕಿ, ಹುಂಡೈ ಮತ್ತು ಟಾಟಾ ಮೋಟಾರ್ಸ್ 2022-23ರಲ್ಲಿ ಉತ್ತಮ ವಹಿವಾಟು ದಾಖಲಿಸಿವೆ. 2023-24ರಲ್ಲಿ ವಾಹನಗಳ ಮಾರಾಟ 40.5 ಲಕ್ಷದಿಂದ 41 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.