Site icon Vistara News

Year End Tour 2023: ಈ ವರ್ಷಾಂತ್ಯದೊಳಗೆ ಈ ಹತ್ತು ಅನುಭವ ನಿಮ್ಮದಾಗಲಿ!

Year End Tour 2023

ಪ್ರತಿ ಬಾರಿ ಹೊಸ ವರ್ಷ (Year End Tour 2023) ಬಂದಾಗ ಈ ವರ್ಷದಲ್ಲಿ ಏನೆಲ್ಲ ಮಾಡಬೇಕು ಎಂದು ಅಂದುಕೊಳ್ಳುವವರು ಬಹಳ. ಕೆಲವು ಅಭ್ಯಾಸಗಳನ್ನು ಬಿಡಬೇಕು, ಕೆಲವು ಒಳ್ಳೆಯ ಕೆಲಸಗಳನ್ನು ಮಾಡಬೇಕು, ಕೆಲೆವೆಡೆ ಪ್ರವಾಸ ಮಾಡಬೇಕು, ಏನೋ ಒಂದಿಷ್ಟು ಸಾಧನೆ ಮಾಡಬೇಕು ಇತ್ಯಾದಿ ಇತ್ಯಾದಿ. ಒಬ್ಬೊಬ್ಬರ ಆಸಕ್ತಿ, ಗುರಿ ಒಂದೊಂದು ತರಹ. ಆದರೆ, ಬದುಕು ಬಹಳ ಚಿಕ್ಕದು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವರ್ಷವೊಂದು ಕಳೆದುಹೋಗುತ್ತದೆ. ಅಂದುಕೊಂಡ ಕೆಲಸಗಳೆಲ್ಲ ಆಗದೆ, ಅಂದುಕೊಂಡದ್ದನ್ನು ಮಾಡಲಾಗದೆ, ಅವೆಲ್ಲ ಮುಂದಿನ ವರ್ಷಕ್ಕೆ ಹಾಗೆಯೇ ರವಾನೆಯಾಗುತ್ತವೆ. ಹೊಸ ಹುರುಪು, ಹುಮ್ಮಸ್ಸಿನಿಂದ ಮತ್ತೆ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಕಳೆದ ವರ್ಷಗಳಲ್ಲಿ ಮಾಡಲಾಗದಿದ್ದದ್ದನ್ನು ಈ ವರ್ಷವಾದರೂ ಮಾಡಿಯೇನು ಎಂಬ ಆಸೆ, ಭರವಸೆ, ಕನಸುಗಳೊಂದಿಗೆ ಮುಂದೆ ಹೆಜ್ಜೆ ಇಡುತ್ತೇವೆ.

ಅಂತೆಯೇ, ಪ್ರವಾಸ ಪ್ರಿಯರ ಪಟ್ಟಿಯೂ ದೊಡ್ಡೇ ಇರುತ್ತದೆ. ಇಂತಿಂಥ ಜಾಗಕ್ಕೆ ಪ್ರವಾಸ ಮಾಡಬೇಕು ಇತ್ಯಾದಿ ಆಸೆಗಳು, ಯೋಜನೆಗಳು ಮತ್ತೊಂದಿಷ್ಟು ರೆಡಿಯಾಗುತ್ತವೆ. ಅದೇನೇ ಇರಲಿ, ನಮ್ಮ ಭಾರತದಲ್ಲಿ ಇದ್ದ ಮೇಲೆ, ಈ ದೇಶದ ವಿಶೇಷತೆಗಳಾದ ಇವಿಷ್ಟನ್ನಾದರೂ ಜೀವನದಲ್ಲಿ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕು, ಅನುಭವಿಸಲೇಬೇಕು. ಹಾಗಾದರೆ, ಬನ್ನಿ, ಹೊಸ ವರ್ಷ ಶುರುವಾಗುವ ಮುನ್ನ, ಜೀವನದಲ್ಲಿ ಪ್ರವಾಸದ ವಿಷಯ ಬಂದಾಗ ಭಾರತದಲ್ಲಿದ್ದುಕೊಂಡು ಮಾಡಲೇಬೇಕಾದ 10 ಪ್ರವಾಸಿ ಅನುಭವಗಳು ಇಲ್ಲಿವೆ.

ಮನಾಲಿಯಲ್ಲಿ ಕ್ಯಾಂಪಿಂಗ್‌

ಇದು ಪ್ರತಿ ಪ್ರವಾಸಪ್ರಿಯರ ಕನಸು. ಮನಾಲಿಗೊಮ್ಮೆ ನಡುಗುವ ಚಳಿಯಲ್ಲೊಮ್ಮೆ ಭೇಟಿ ನೀಡಬೇಕು. ಹಿಮದಲ್ಲಿ ಆಡಬೇಕು. ಅಲ್ಲೇ ಕ್ಯಾಂಪಿಂಗ್‌ ಮಾಡಬೇಕು ಇತ್ಯಾದಿ. ಚಳಿಗಾಲದಲ್ಲಿ ಹಿಮಪರ್ವತಗಳನ್ನು ಕಣ್ತುಂಬಿಕೊಳ್ಳುತ್ತಾ ಇವನ್ನೆಲ್ಲ ಮಾಡಿ ಮನಾಲಿಯಲ್ಲಿ ಕ್ಯಾಂಪಿಂಗ್‌ ಮಾಡುವುದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು ಆಗಬಲ್ಲುದು.

ಚಿರಾಂಪುಂಜಿಯ ಜಲಪಾತಗಳು

ಭಾರತದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಮೇಘಾಲಯ ರಾಜ್ಯದಲ್ಲಿ ಸುತ್ತು ಹಾಕಿ, ಚಿರಾಪುಂಜಿಯ ಜಲಪಾತಗಳ ಸೌಂದರ್ಯ ಜೀವಮಾನದಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ್ದು.

ಹಂಪಿಯಲ್ಲಿ ತೆಪ್ಪದಲ್ಲೊಂದು ಸುತ್ತು

ಹಂಪಿಗೆ ಹೋಗಿ ಅಲ್ಲಿ ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಕಣ್ತುಂಬಿಕೊಂಡು ತುಂಗಭದ್ರಾ ನದಿಯಲ್ಲೊಂದು ತೆಪ್ಪದಲ್ಲಿ ಪಯಣ ಮಾಡದಿದ್ದರೆ ಕನ್ನಡಿಗನಾಗಿದ್ದುಕೊಂಡು ಜೀವನ ಸಾರ್ಥಕವಾಗದು.

ಮುಂಬೈಯಲ್ಲಿ ಗಣೇಶೋತ್ಸವ

ಮುಂಬೈ ಸುತ್ತಮುತ್ತಲ ಗಣೇಶೋತ್ಸವ ಎಂದರೆ ಅದು ದೊಡ್ಡ ಹಬ್ಬ. ಗೌಜು. ಗದ್ದಲ. ಅಲ್ಲಿನ ಆಡಂಬರ, ಉತ್ಸವವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಸಂಭ್ರಮ.

ವಾರಣಾಸಿಯಲ್ಲೊಂದು ಗಂಗಾರತಿ

ಗಂಗಾರತಿ ಎಂಬ ಅದ್ಭುತ ಆಧ್ಯಾತ್ಮದ ಅನುಭೂತಿಯನ್ನು ಪಡೆಯಬೇಕೆಂದರೆ ಅದಕ್ಕೆ ವಾರಣಾಸಿಗೇ ಹೋಗಬೇಕು. ಗಂಗೆಯ ತೀರದಲ್ಲೊಮ್ಮೆ ನಡೆದಾಡಬೇಕು. ಸಂಜೆ ದೋಣಿಯಲ್ಲಿ ಕೂತು ಭಕ್ತಿಯಿಂದ ಗಂಗಾರತಿಯನ್ನು ಕಣ್ತುಂಬಿಕೊಳ್ಳಬೇಕು.

ಕೋಲ್ಕತ್ತಾದಲ್ಲಿ ದುರ್ಗಾಪೂಜೆ

ನವರಾತ್ರಿಯ ಅಷ್ಟೂ ದಿನಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕೆಂದರೆ ಒಮ್ಮೆಯಾದರೂ ಕೋಲ್ಕತ್ತಾದ ಬೀದಿಗಳಲ್ಲಿ ನವರಾತ್ರಿಯ ದಿನಗಳಲ್ಲಿ ಅಡ್ಡಾಡಬೇಕು. ಅಲ್ಲಿನ ಸಂಭ್ರಮಾಚರಣೆಗಳನ್ನು ನೋಡಬೇಕು.

ಜೈಸಲ್ಮೇರ್‌ನ ಮರುಭೂಮಿ ಸಫಾರಿ

ಭಾರತದಲ್ಲೇ ಮರುಭೂಮಿಯನ್ನು ನೋಡಲು ಸಾಧ್ಯವಿರುವಾಗ ಬೇರೆ ದೇಶಗಳಿಗೆ ಯಾಕೆ ಹೋಗಬೇಕು. ಒಮ್ಮೆ ಜೈಸಲ್ಮೇರ್‌ನ ಮರಳಿನಲ್ಲಿ ಅಡ್ಡಾಡಿ, ಡೆಸರ್ಟ್‌ ಸಫಾರಿ ಮಾಡಿ ಬನ್ನಿ.

ಕೇದಾರನಾಥಕ್ಕೊಂದು ಚಾರಣ

ಭಾರತದಲ್ಲಿ ಪರ್ವತಗಳಿಗೂ ಭಗವಂತನಿಗೂ ಬಹುದೊಡ್ಡ ನಂಟು. ಪರ್ವತವೇರಿ, ಭಗವಂತನ ದರ್ಶನ ಮಾಡಿದರೆ ಹತ್ತಿದ್ದೂ ಸಾರ್ಥಕ ಎಂಬ ನಂಬಿಕೆ. ಕೇದಾರನಾಥನ ದರ್ಶನಕ್ಕೆ ಚಾರಣ ಮಾಡುವುದೆಂದರೆ ಅದು ಸಣ್ಣ ವಿಚಾರವಲ್ಲ. ಬದುಕಿನಲ್ಲೊಮ್ಮೆ ಕೇದಾರನ ಚಾರಣ ಮಾಡುವುದು ಬಹುತೇಕರ ಕನಸು.

ಋಷಿಕೇಶದಲ್ಲೊಂದು ರಿವರ್‌ ರ್ಯಾಫ್ಟಿಂಗ್‌

ಗಂಗೆಯಲ್ಲೊಮ್ಮೆ ರ್ಯಾಫ್ಟಿಂಗ್‌ ಮಾಡುವುದು ಬಹುತೇಕ ಸಾಹಸಪ್ರಿಯ ಪ್ರವಾಸಿಗರ ಕನಸು. ಅದು ರೋಮಾಂಚನ ನೀಡುವ ಅನುಭವ ಕೂಡಾ.

ಲಡಾಕ್‌ಗೊಂದು ಬೈಕ್‌ ಟ್ರಿಪ್‌

ಸಾಹಸಪ್ರಿಯ ಪ್ರವಾಸಿಗರು ಇಷ್ಟಪಡುವ, ಬದುಕಿನಲ್ಲೊಮ್ಮೆಯಾದರೂ ಮಾಡಲೇಬೇಕೆಂದು ಆಸೆಪಡುವ ಪಯಣವೆಂದರೆ ಅದು ಲಡಾಕ್‌ಗೆ ಬೈಕ್‌ ಟ್ರಿಪ್‌. ಭಾರತದ ಯುವ ಮಂದಿಯ ಸೆಳೆತ ಇದು.

ಕೇವಲ ಇಷ್ಟೇ ಅಲ್ಲ. ಜಿಮ್‌ ಕಾರ್ಬೆಟ್‌ನಲ್ಲೊಂದು ಜಂಗಲ್‌ ಸಫಾರಿ, ಕೇರಳದ ಹಿನ್ನೀರಿನಲ್ಲಿ ಹೌಸ್‌ಬೋಟ್‌ ಮೂಲಕ ಸವಾರಿ, ಬಿರ್‌ನಲ್ಲೊಂದು ಪಾರಾಗ್ಲೈಡಿಂಗ್‌, ಅಂಡಮಾನ್‌ ನಿಕೋಬಾರ್‌ನಲ್ಲೊಂದು ಸ್ಕೂಬಾ ಡೈವಿಂಗ್‌, ಸೌತ್‌ ಬಾಂಬೆಯಲ್ಲೊಂದು ಓಪನ್‌ ಬಸ್‌ ಟೂರ್‌, ಗುಲ್ಮಾರ್ಗ್‌ನಲ್ಲೊಂದು ಸ್ಕೀಯಿಂಗ್‌, ವೃಂದಾವನದಲ್ಲೊಂದು ಹೋಲಿ, ಕಚ್‌ನ ವೈಟ್‌ ಡೆಸರ್ಟ್‌ಗೆ ಭೇಟಿ, ಚಾಂದನಿ ಚೌಕ್‌ನ ರಸ್ತೆಬದಿಯ ಊಟ, ಮೈಸೂರಿನಲ್ಲಿ ದಸರಾ ವೀಕ್ಷಣೆ ಹೀಗೆ ಪಟ್ಟಿ ಮಾಡಿದರೆ, ಪ್ರಪಂಚವೇ ನಮ್ಮ ಭಾರತದೊಳಗಿದೆ. ನಮ್ಮ ದೇಶ ಸುತ್ತಿ ನಮ್ಮದೇ ದೇಶದ ಅದ್ಭುತಗಳನ್ನು ನಾವೇ ನಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನೋಡದಿದ್ದರೆ ಹೇಗೆ ಹೇಳಿ! ಹೊಸ ವರ್ಷದ ಪಟ್ಟಿಯಲ್ಲಿ ಈ ಪಟ್ಟಿಯನ್ನೂ ಸೇರಿಸೋಣ.

ಇದನ್ನೂ ಓದಿ: Winter Travel Destinations: ಚಳಿಗಾಲದಲ್ಲಿ ಪ್ರವಾಸ ಮಾಡಬಹುದಾದ ದೇಶದ ಟಾಪ್ 11 ತಾಣಗಳು

Exit mobile version