Site icon Vistara News

Viral Video: ಸ್ಕೂಟರ್‌ನಲ್ಲೇ ಆನ್‌ಲೈನ್‌ ಮೀಟಿಂಗ್‌ ನಡೆಸಿದ ಮಹಿಳೆ; ಇದು ವರ್ಕ್‌ ಫ್ರಮ್‌ ಟ್ರಾಫಿಕ್‌ ಬ್ರೋ!

Viral Video

Viral Video

ಬೆಂಗಳೂರು: ಸಿಲಿಕಾನ್‌ ಸಿಟಿ, ಗಾರ್ಡನ್‌ ಸಿಟಿ, ಐಟಿ ಸಿಟಿ ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರು ಬಹುತೇಕ ಎಲ್ಲರಿಗೂ ಪ್ರಿಯ. ಹೀಗೆ ಎಲ್ಲರ ನೆಚ್ಚಿನ ನಮ್ಮ ಬೆಂಗಳೂರು ಬಗ್ಗೆ ಹಲವರ ಆಕ್ಷೇಪ ಇರುವುದು ಟ್ರಾಫಿಕ್‌ ವಿಚಾರದಲ್ಲಿ. ಟ್ರಾಫಿಕ್‌ ಸಮಸ್ಯೆ ಬೆಂಗಳೂರಿಗರನ್ನು ಹೆಚ್ಚಿನ ಸಂದರ್ಭಗಳಲ್ಲಿ ಹೈರಾಣಾಗಿಸುತ್ತದೆ (Bengaluru Traffic). ಬೆಂಗಳೂರಿನ ಈ ಟ್ರಾಫಿಕ್‌ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ. ಬೆಂಗಳೂರು ಟ್ರಾಫಿಕ್‌ ಬಗ್ಗೆ ತಹೇವಾರಿ ಕಥೆ ಹುಟ್ಟಿಕೊಳ್ಳುತ್ತದೆ. ಟ್ರಾಫಿಕ್‌ಗೆ ಸಿಲುಕಿ ಅನೇಕ ವಿಶಿಷ್ಟ ಸಂಗತಿ ಜರಗುತ್ತವೆ. ಅದಕ್ಕೆ ತಕ್ಕ ಉದಾಹರಣೆ ಎನ್ನುವಂತಿದೆ ಈ ವೈರಲ್‌ ವಿಡಿಯೊ (Viral Video). ಅಷ್ಟಕ್ಕೂ ಈ ವಿಡಿಯೊದಲ್ಲಿ ಏನಿದೆ? ಇಲ್ಲಿದೆ ವಿವರ.

ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡ ಸ್ಕೂಟರ್‌ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಅಲ್ಲೇ ಆನ್‌ಲೈನ್‌ ಮೀಟಿಂಗ್‌ನಲ್ಲಿ ಭಾಗಿಯಾಗುತ್ತಾರೆ. ʼವರ್ಕ್‌ ಫ್ರಮ್‌ ಟ್ರಾಫಿಕ್‌ʼ ಎನ್ನುವ ಶೀರ್ಷಿಕೆಯಡಿ ವಿಡಿಯೊವನ್ನು ಶೇರ್‌ ಮಾಡಲಾಗಿದೆ. ಬೆಂಗಳೂರಿನಲ್ಲಿ ಇದು ಸಾಮಾನ್ಯ ಎಂದೂ ಬರೆಯಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೊದಲ್ಲಿ ಏನಿದೆ?

ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಮಹಿಳೆ ಸ್ಕೂಟರ್‌ ಅನ್ನು ಒಂದು ಬದಿಗೆ ನಿಲ್ಲಿಸಿ ಆನ್‌ಲೈನ್‌ ಮೀಟಿಂಗ್‌ಗೆ ಹಾಜರಾಗುತ್ತಾರೆ. ಕ್ಯಾಮೆರಾವನ್ನು ಮಹಿಳೆಯ ಮೊಬೈಲ್‌ಗೆ ಝೂಮ್‌ ಮಾಡಿದಾಗ ಅವರು ಮೀಟಿಂಗ್‌ನಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗುತ್ತದೆ. ಜತೆಗೆ ವಿಡಿಯೊ ಹಲವು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್‌ ಜಾಮ್‌ ಆಗಿರುವುದನ್ನು ತೋರಿಸುತ್ತದೆ. ಮಹಿಳೆಗೆ ಕರ್ತವ್ಯ ಪ್ರಜ್ಞೆಗೆ ಹಲವರು ಶಬ್ಬಾಶ್‌ಗಿರಿ ತಿಳಿಸಿದ್ದಾರೆ.

ಆಧುನಿಕ ಯುಗದಲ್ಲಿ ವೈಯಕ್ತಿಕ ಬದುಕು ಮತ್ತು ಉದ್ಯೋಗವನ್ನು ಸಮತೋಲನಗೊಳಿಸಲೇಬೇಕಾದ ಅನಿವಾರ್ಯತೆಯನ್ನು ಇದು ಒತ್ತಿ ಹೇಳುತ್ತದೆ. ಜತೆಗೆ ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನೂ ಇದು ಪ್ರತಿನಿಧಿಸುತ್ತದೆ.

ಸ್ಕೂಟರ್‌ ರೈಡಿಂಗ್‌ ಮಾಡ್ತಾ ಲ್ಯಾಪ್‌ಟಾಪ್‌ನಲ್ಲಿ ವಿಡಿಯೊ ಕಾಲ್‌

ಈ ರೀತಿಯ ಘಟನೆ ಹಿಂದೆಯೂ ನಡೆದಿತ್ತು. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸ್ಕೂಟರ್‌ ಓಡಿಸುತ್ತ ಲ್ಯಾಪ್‌ಟಾಪ್‌ನಲ್ಲಿ ವಿಡಿಯೊ ಕಾಲ್‌ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಟೆಕ್ಕಿಯಂತೆ ಕಾಣುವ ವ್ಯಕ್ತಿಯೊಬ್ಬರು ಬೆಂಗಳೂರಿನ ರಸ್ತೆಯಲ್ಲಿ ಸ್ಕೂಟರ್‌ ಓಡಿಸುತ್ತಿದ್ದಾರೆ. ಅವರ ಮುಂದುಗಡೆ ಲ್ಯಾಪ್‌ಟಾಪ್‌ ಓಪನ್‌ ಆಗಿದ್ದು, ವಿಡಿಯೊ ಕಾನ್ಫರೆನ್ಸ್‌ ನಡೆಯುತ್ತಿದೆ. ಅದರಲ್ಲಿ ಈ ವ್ಯಕ್ತಿಯೂ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಬೆಂಗಳೂರಿನ ವಾಹನನಿಬಿಡ ರಸ್ತೆಯಲ್ಲಿ ಸ್ಕೂಟರ್‌ ಚಲಾವಣೆಯನ್ನೂ ಕಚೇರಿ ಕೆಲಸವನ್ನೂ ಬ್ಯಾಲೆನ್ಸ್‌ ಮಾಡುತ್ತಿರುವ ಈ ವ್ಯಕ್ತಿಯ ಚಾಕಚಕ್ಯತೆ ಹಲವರಲ್ಲಿ ಬೆರಗು ಮೂಡಿಸಿತ್ತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಉಲ್ಲಾಸದ, ಟೀಕೆಯ, ವಿನೋದದ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿತ್ತು. ಕೆಲವು ಬಳಕೆದಾರರು ರಸ್ತೆ ಸುರಕ್ಷತೆ ಮತ್ತು ಕೆಲಸದ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Bengaluru Traffic: ಟ್ರಾಫಿಕ್‌ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!

ಅದಕ್ಕೂ ಹಿಂದೆ ಆನ್‌ಲೈನ್‌ ಫುಡ್‌ ಡೆಲಿವರಿ ಮಾಡುವವರು ಬೆಂಗಳೂರಿನ ಟ್ರಾಫಿಕ್‌ನಲ್ಲೇ ಆರ್ಡರ್‌ ಮಾಡಿದ ವ್ಯಕ್ತಿಗೆ ಆಹಾರ ವಿತರಿಸಿ ಸುದ್ದಿಯಾಗಿದ್ದರು. ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದ್ದ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಶಿವತ್ಸ್‌ ಡೊಮಿನೋಸ್‌ನಿಂದ ಆಹಾರ ಆರ್ಡರ್‌ ಮಾಡಿದ್ದರು. ಅವರ ಲೈವ್‌ ಲೊಕೇಷನ್‌ ಟ್ರ್ಯಾಕ್‌ ಮಾಡಿದ ಫುಡ್‌ ಡೆಲಿವರಿ ಏಜೆಂಟ್‌ಗಳು ಕಾರಿನ ಬಳಿಗೇ ಬಂದು ಡೆಲಿವರಿ ಮಾಡಿದ್ದರು. ರಿಶಿವತ್ಸ್‌ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ಡೊಮಿನೋಸ್‌ನ ಏಜೆಂಟ್‌ಗಳಿಬ್ಬರು ಸ್ಕೂಟರ್‌ನಲ್ಲಿ ಆಗಮಿಸಿದ್ದರು. ಬಳಿಕ ಅವರು ತಮ್ಮ ವಾಹನವನ್ನು ರಸ್ತೆ ಬದಿ ನಿಲ್ಲಿ ಕಾರಿನ ಬಳಿಗೆ ಬಂದು ಆರ್ಡರ್‌ ನೀಡಿದ್ದರು. ಈ ದೃಶ್ಯ ವೈರಲ್‌ ಆಗಿತ್ತು.

Exit mobile version