ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗಕ್ಕೆ (Sela Tunnel) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಚಾಲನೆ ನೀಡಿದ್ದಾರೆ. ಸಂಪರ್ಕ, ಸಾಗಣೆ ಜೊತೆಗೆ ವ್ಯೂಹಾತ್ಮಕವಾಗಿಯೂ ಈ ಸುರಂಗವು ಪ್ರಾಮುಖ್ಯತೆ ಪಡೆದಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲೇ ಅತಿ ಉದ್ದದ ಅವಳಿ ಸುರಂಗ (Twin Tunnels) ಎಂಬ ಖ್ಯಾತಿಗೂ ಇದು ಭಾಜನವಾಗಿದೆ. 825 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿರುವ ಇದು ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕ ಕಲ್ಪಿಸಲಿದೆ. ಎರಡೂ ಸುರಂಗಗಳ ನಡುವೆ 1,200 ಮೀಟರ್ ಉದ್ದದ ಲಿಂಕ್ ರೋಡ್ ಕೂಡ ಇದೆ. ಅರುಣಾಚಲ ಪ್ರದೇಶದಲ್ಲಿ ಗಡಿ ತಂಟೆ ಮಾಡುವ ಚೀನಾ ಎದುರಿಸಲು ಸೆಲಾ ಸುರಂಗವು ವ್ಯೂಹಾತ್ಮಕವಾಗಿ ಪ್ರಮುಖವಾಗಿದೆ.
ತಮ್ಮ ದೇಶದ ಪುರಾತನ ಪ್ರದೇಶ ಅರುಣಾಚಲ ಎಂದು ಆಗಾಗ ಚೀನಾ ಕ್ಯಾತೆ ತೆಗೆಯುವ ತವಾಂಗ್ ಪ್ರದೇಶದಲ್ಲಿ ಈ ಸುರಂಗವು ಸಂಪರ್ಕ ಕಲ್ಪಿಸಲಿದೆ. ಇದರಿಂದ ತವಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಹೆಚ್ಚು ನಿಗಾ ಇರಿಸಲು ಸಾಧ್ಯವಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಚಳಿಗಾಲದಲ್ಲಿ ಭಾರಿ ಪ್ರಮಾಣದ ಹಿಮಪಾತದಿಂದ ಹತ್ತಾರು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗುತ್ತದೆ. ಆದರೆ, ಸೆಲಾ ಸುರಂಗವು ಚಳಿಗಾಲ ಸೇರಿದಂತೆ ಎಲ್ಲ ಹವಾಮಾನಗಳಲ್ಲಿ ಕೂಡ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ಚಳಿಗಾಲದಲ್ಲಿ ಗಡಿಯಲ್ಲಿ ಯಾವುದೇ ತುರ್ತು ಸಂದರ್ಭ ಎದುರಾದರೆ, ಸೇನೆಯು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಸುರಂಗವು ಅನುಕೂಲ ಕಲ್ಪಿಸಲಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕ್ಷಿಪ್ರವಾಗಿ ನಿಯೋಜಿಸಲು, ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕೂಡ ಅನುಕೂಲವಾಗಲಿದೆ.
ಚೀನಾ ಇತ್ತೀಚೆಗೆ ಭಾರತದ ದಕ್ಷಿಣದ ಸಾಗರ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮಾಲ್ಡೀವ್ಸ್‌ನ ಅಧ್ಯಕ್ಷ ಮುಯಿಜು, ಅಲ್ಲಿಂದ ಭಾರತದ ಸೇನೆಯನ್ನು ಹಿಂತೆಗೆಯಲು ಆದೇಶಿಸಿದ್ದಾರೆ. ನಿಧಾನವಾಗಿ ಮಾಲ್ಡೀವ್ಸ್ ಚೀನಾದ ವಸಾಹತು ಆಗಬಹುದು. ಇದಕ್ಕೆ ಲಕ್ಷದ್ವೀಪದಲ್ಲಿ ಸೇನಾ ನೆಲೆ ಸ್ಥಾಪಿಸುವ ಮೂಲಕ ಭಾರತ ಪರೋಕ್ಷ ಉತ್ತರವನ್ನೂ ನೀಡಿದೆ. ಭಾರತದ ಉತ್ತರದಲ್ಲಿ ಹಿಮಾಲಯ ಪರ್ವತಗಳ ಮೂಲಕ ಚೀನಾದ ಅತಿಕ್ರಮಣದ ಆತಂಕ ಯಾವಾಗಲೂ ಇದೆ. 1962ರಲ್ಲಿ ನಡೆದ ಯುದ್ಧದಲ್ಲಿ ಅರುಣಾಚಲ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಆದರೆ 2019ರಲ್ಲಿ ನಡೆದ ಗಲ್ವಾನ್ ಗಡಿ ಚಕಮಕಿಯಲ್ಲಿ ಚೀನಾಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. 1962ರ ಭಾರತಕ್ಕೂ 2024ರ ಭಾರತಕ್ಕೂ ವ್ಯತ್ಯಾಸವಿದೆ. ಗಡಿಯಲ್ಲಿ ಹಾಗೂ ಮಿಲಿಟರಿಯಲ್ಲಿ ಸಕಲ ಸನ್ನದ್ಧತೆಯೇ ಇಂದಿನ ಭಾರತದ ಸ್ವಾಭಿಮಾನ, ಸಾರ್ವಭೌಮತೆಗೆ ಕಾರಣ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಎಲ್‌ಪಿಜಿ ಬೆಲೆ ಇಳಿಕೆ ಶ್ಲಾಘನೀಯ, ಹೊರೆ ತಗ್ಗಿಸಿದ ಕ್ರಮ
ಸೆಲಾ ಸುರಂಗವು ಇಂಥ ಉಪಕ್ರಮಗಳಲ್ಲಿ ಒಂದು. ಭಾರತವು ಗಡಿ ಪ್ರದೇಶಗಳಿಗೆ ಕ್ಷಿಪ್ರವಾಗಿ ಸೈನಿಕರನ್ನೂ ಶಸ್ತ್ರಾಸ್ತ್ರಗಳನ್ನೂ ಸಾಗಿಸಬಹುದಾದ ರಸ್ತೆ ವ್ಯವಸ್ಥೆಗಳನ್ನು ಕಳೆದ 10 ವರ್ಷಗಳಲ್ಲಿ ಹಲವು ಪಟ್ಟು ವೃದ್ಧಿಸಿಕೊಂಡಿದೆ. ಭಾರತೀಯ ಯೋಧರು ಮೂರು ವರ್ಷದ ಹಿಂದೆ ಚೀನಾದ ಯೋಧರೊಂದಿಗೆ ಮುಖಾಮುಖಿ ಚಕಮಕಿ ನಡೆಸಿದ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿ ನಾಗರಿಕ ವಾಯುನಿಲ್ದಾಣ ಸ್ಥಾಪಿಸುವ ಕೆಲಸವನ್ನು ಸರ್ಕಾರ ಆರಂಭಿಸಿದೆ. ಲಡಾಖ್‌ನ ನುಬ್ರಾ ಪ್ರದೇಶದ ಥೋಯಿಸ್ ವಾಯುನೆಲೆಯಲ್ಲಿ ಹೊಸ ನಾಗರಿಕ ಟರ್ಮಿನಲ್ ಬರಲಿದೆ. ಥೋಯಿಸ್ ವಾಯುಸೇನಾ ನೆಲೆಯಾಗಿದ್ದು, ಸಶಸ್ತ್ರ ಪಡೆಗಳು ಪ್ರತ್ಯೇಕವಾಗಿ ಬಳಸುವ ರನ್‌ವೇಯನ್ನು ಹೊಂದಿದೆ. ಇದು ಗಡಿಯ ಸಮೀಪದಿಂದ ದೇಶದ ದೂರದ ಮೂಲೆಗಳ ನಾಗರಿಕರಿಗೆ ವಾಯು ಸಂಪರ್ಕವನ್ನು ಒದಗಿಸಲಿದೆ. ಇಂಥ ಉಪಕ್ರಮಗಳು ಗಡಿಪ್ರದೇಶದಲ್ಲಿ ಹೆಚ್ಚಿದ್ದಷ್ಟು ಸುರಕ್ಷತೆ ಹೆಚ್ಚು. ಸೆಲಾ ಸುರಂಗವೂ ಇದರ ಮುಂದುವರಿದ ಭಾಗವಾಗಿದೆ.