Site icon Vistara News

Karnataka Weather: ಮೈಸೂರಲ್ಲಿ ಬಿರುಗಾಳಿಗೆ ಸಿಲುಕಿ ವೃದ್ಧೆ ಸಾವು; ಮತ್ತೆ ಗುಡುಗು ಸಹಿತ ಗಾಳಿ ಮಳೆಯ ಎಚ್ಚರಿಕೆ

karnataka weather Forecast

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಬಿಸಿಲು ಸಿಕ್ಸರ್‌ ಬಾರಿಸುತ್ತಿದ್ದರೆ, ಅತ್ತ ಮಳೆಯು ಫೋರ್ ಬಾರಿಸುತ್ತಿದೆ. ಗುರುವಾದ ಅಬ್ಬರಿಸಿದ ಬಿರುಗಾಳಿ ಮಳೆಗೆ (Rain News) ವೃದ್ಧೆಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಘಟನೆ (Karnataka Weather Forecast) ನಡೆದಿದೆ.

ಮಾದಮ್ಮ (66) ಮೃತ ದುರ್ದೈವಿ. ನಿನ್ನೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮಾದಮ್ಮ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂದಿನಂತೆ ತಮ್ಮ ಜಮೀನಿಗೆ ಮೇವು ತರಲು ಹೋದ ಸಂದರ್ಭದಲ್ಲಿ ಬಿರುಗಾಳಿ ಮಳೆಗೆ ಸಿಲುಕಿದ್ದಾರೆ. ಮೇವನ್ನು ತೆಗೆದುಕೊಂಡು ಬರುವಾಗ ರಸ್ತೆ ಮಧ್ಯದಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಕುಸಿದು ಬಿದ್ದಿದ್ದಾರೆ. ಕೆಳಗಡೆ ಬಿದ್ದ ಪರಿಣಾಮ ಮಾದಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ನಾಗರಹೊಳೆ ಅಭಯಾರಣ್ಯಕ್ಕೆ ತಂಪೆರೆದ ಮಳೆರಾಯ

ನಾಗರಹೊಳೆ ಅಭಯಾರಣ್ಯದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾಡ್ಗಿಚ್ಚು ಆತಂಕದಲ್ಲಿದ್ದ ಸಿಬ್ಬಂದಿಗೆ ವರಣನ ಸಿಂಚನದಿಂದ ಆತಂಕ ದೂರವಾಗಿದೆ. ಮೈಸೂರು ಜಿಲ್ಲೆ ಎಚ್.ಡಿ ಕೋಟೆ ಮಾರ್ಗ ಮಧ್ಯೆ ಬಿರುಗಾಳಿ ಸಹಿತ ಸುರಿದ ಮಳೆಗೆ ನೂರಾರು ಮರಗಳು ಧರೆಗುರುಳಿದ್ದವು.

ಎಚ್.ಡಿ ಕೋಟೆಯ ದಮ್ಮನಕಟ್ಟೆ ವಲಯದಲ್ಲಿ ಧಾರಾಕಾರ ಮಳೆಯಾಗಿದೆ. ಒಣಗಿ ನಿಂತ ಕಾನನಕ್ಕೆ ಜೀವ ಕಳೆ ಬಂದಿದೆ. ರಸ್ತೆಯ ಹಿಕ್ಕೆಲೆಗಳ ಹಸಿರು ಹುಲ್ಲು ಬರಲು ಮೊದಲ ಮಳೆ ಸಹಕಾರಿಯಾಗಿದೆ. ಸದ್ಯಕ್ಕೆ ಕಾಡಿಗೆ ಬೆಂಕಿ ಬೀಳುವ ಆತಂಕವು ಅರಣ್ಯ ಇಲಾಖೆ‌ ಸಿಬ್ಬಂದಿಗೆ ದೂರಾವಾಗಿದೆ.

ಶನಿವಾರವೂ ಮಳೆ ಅಬ್ಬರ

ಶನಿವಾರ ಮಧ್ಯಾಹ್ನದಂದು ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಐಎಂಡಿ ಮಾಹಿತಿ ನೀಡಿದೆ.

ಮೇ.5ರ ಭಾನುವಾರದಂದು ದಕ್ಷಿಣ ಒಳನಾಡಿನ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಏ. 6ರಂದು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

ಶಾಖದ ಅಲೆಯ ಎಚ್ಚರಿಕೆ

ಮಳೆ ನಡುವೆಯೂ ಕೆಲವೆಡೆ ಶಾಖದ ಅಲೆಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ. ಮುಂದಿನ 4 ದಿನಗಳವರೆಗೆ ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ರಾತ್ರಿ ಸಮಯ ಬೆಚ್ಚಗಿನ ವಾತಾವರಣ ಇರಲಿದೆ. ಕರಾವಳಿಯಲ್ಲಿ ಬಿಸಿ ಗಾಳಿ ಬೀಸಲಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 24ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version