ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದ್ದು, ಉಳಿದೆಡೆ ವ್ಯಾಪಕವಾಗಿ ಅತ್ಯಂತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಚಿತ್ರದುರ್ಗ, ತುಮಕೂರು, ಮಂಡ್ಯ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಪ್ರತ್ಯೇಕವಾಗಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಆರೆಂಜ್ ಅಲರ್ಟ್
ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಗಾಳಿ 30-40 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಯೆಲ್ಲೋ ಅಲರ್ಟ್
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ: Karnataka Rain : ಯಾದಗಿರಿಯಲ್ಲಿ ಭಯಂಕರ ಮಳೆ; ಸಿಡಿಲಿಗೆ ಒಂದೇ ದಿನ ನಾಲ್ವರು ಬಲಿ
ಸಿಡಿಲು ಬಡಿದು ನಾಲ್ವರು ಸಾವು
ಸೋಮವಾರ ಯಾದಗಿರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇಬ್ಬರು ಸಹೋದರರು ಹಾಗೂ ಸಹೋದರಿ ದುರ್ಮರಣ ಹೊಂದಿದ್ದಾರೆ. ಯಾದಗಿರಿ ತಾಲೂಕಿನ ಜೀನಕೇರಾ ತಾಂಡದಲ್ಲಿ ಘಟನೆ ನಡೆದಿದೆ.
ಕೀಶನ್ ಜಾಧವ್ ( 25), ಚನ್ನಪ್ಪ ಜಾಧವ್ (18) ಹಾಗೂ ಸುನೀಬಾಯಿ ರಾಠೋಡ (27), ನೇನು ಜಾಧವ್ (15) ಮೃತ ದುರ್ದೈವಿ. ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ. ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಯಾದಗಿರಿ ತಾಲ್ಲೂಕಿನ ಜೀನಕೇರಾ ತಾಂಡಾದಲ್ಲಿ ಕುಟುಂಬಸ್ಥರ ಜತೆ ಉಳ್ಳಾಗಡ್ಡಿ ಹಚ್ಚಲು ತೆರಳಿದರು. ಈ ವೇಳೆ ಭಾರಿ ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ದೇವಸ್ಥಾನದೊಳಗೆ ತೆರಳಿದರು. ಜೀನಕೇರಾ ತಾಂಡಾದ ದುರ್ಗಮ್ಮ ದೇವಸ್ಥಾನದೊಳಗೆ ತೆರಳಿದ್ದರು. ಈ ವೇಳೆ ಸಿಡಿಲು ಬಡಿದಿದೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಾದಗಿರಿಯಲ್ಲಿ ಅಬ್ಬರಿಸಿದ್ದ ಮಳೆ
ಯಾದಗಿರಿ ಜಿಲ್ಲೆಯಲ್ಲಿ ಸೋಮವಾರ ಮಳೆಯು ಅಬ್ಬರಿಸಿದೆ. ಕಳೆದ ಒಂದು ಗಂಟೆಗೂ ಹೆಚ್ಚು ಮಳೆ ಸುರಿದಿದೆ. ಯಾದಗಿರಿ ನಗರ, ವಡಗೇರಾ ಸೇರಿದಂತೆ ಮೊದಲಾದ ಕಡೆ ಮಳೆ ಅರ್ಭಟ ಜೋರಾಗಿತ್ತು. ವರುಣನ ಅಬ್ಬರಕ್ಕೆ ರಸ್ತೆ ಜಲಾವೃತಗೊಂಡಿತ್ತು. ಕೇಂದ್ರ ಬಸ್ ನಿಲ್ದಾಣ ಮುಂಭಾಗ ರಸ್ತೆ ಕರೆಯಂತಾಗಿತ್ತು. ಊರಿಗೆ ತೆರಳಲು ಜನರು ಸಂಕಷ್ಟ ಪಡಬೇಕಾಯಿತು.
ಕಲಬುರಗಿಯಲ್ಲೂ ಒಂದು ಗಂಟೆಯಿಂದ ಧಾರಾಕಾರ ಮಳೆಯಾಗಿದೆ. ಕಲಬುರಗಿ ನಗರ, ಗ್ರಾಮೀಣ , ಔರಾದ್ ಸೇರಿ ಹಲವು ಭಾಗದಲ್ಲಿ ಭಾರಿ ಮಳೆಯಾಗಿದ್ದು, ರಿಂಗ್ ರಸ್ತೆಯಲ್ಲೂ ಗುಡುಗು ಸಹಿತ ಸುರಿದ ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು, ಕಾಲುವೆಯಂತಾಗಿತ್ತು. ವಾಹನ ಸವಾರರು ಪರದಾಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ