Edited By: Pragati Bhandari

 ರಾಮಕೃಷ್ಣ ಮಹಾಬಲೇಶ್ವರ ಹೆಗಡೆ ಅವರು 1926ರ ಆ.29ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಿಸಿದರು. ಅವರ ಪತ್ನಿ ಶಕುಂತಲಾದೇವಿ. ಪುತ್ರ ಭರತ್‌ ಹೆಗಡೆ, ಮಮತಾ ಮತ್ತು ಸಮತಾ ಪುತ್ರಿಯರು.

 ಹೆಗಡೆಯವರು ವಾರಾಣಸಿಯ ಕಾಶಿ ವಿದ್ಯಾಪೀಠದಲ್ಲಿ ಅಧ್ಯಯನ ನಡೆಸಿದರು. ಆ ಬಳಿಕ ಅಲಹಾಬಾದ್‌ ವಿವಿಯಲ್ಲಿ ಶಿಕ್ಷಣ ಮುಂದುವರಿಸಿದರು. ಕಾನೂನು ಪದವಿ ಪಡೆದ ಬಳಿಕ ಕೆಲ ಕಾಲ ವಕೀಲಿ ವೃತ್ತಿ ನಡೆಸಿದ್ದರು.

 ರಾಮಕೃಷ್ಣ ಹೆಗಡೆ 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. 1954ರಿಂದ 1957ರವರೆಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಮೈಸೂರು ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಮುಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. 

 ಹೆಗಡೆಯವರು 1957, 1962, 1967, 1983, 1985 ಮತ್ತು 1989ರಲ್ಲಿ ಶಾಸಕರಾಗಿದ್ದರು. 1978-83, 1996-2002ರ ಅವಧಿಯಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. 1998-99ರ ಅವಧಿಯಲ್ಲಿ ಕೇಂದ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿದ್ದರು. ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು.

 1983ರಿಂದ  1988ರ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅವರಿಗೆ ಅಪಾರವಾದ ಹಿಡಿತ ಇತ್ತು. ಕರ್ನಾಟಕದಲ್ಲಿನ ಮೊದಲ ಕಾಂಗ್ರೆಸ್ಸೇತರ ಸಿಎಂ ಎಂಬ ಖ್ಯಾತಿ ಅವರದಾಗಿತ್ತು.

 1983ರಲ್ಲಿ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಆದರೆ 1984ರ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ 28ರಲ್ಲಿ ಕೇವಲ 4 ನಾಲ್ಕು ಸ್ಥಾನ ಗಳಿಸಿತು. ಆಗ ಹೆಗಡೆಯವರು ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗಿ ಗೆದ್ದರು.

 1985ರಲ್ಲಿ ಜನತಾ ಪಕ್ಷ ಸ್ವಂತ ಬಲದಿಂದ ಪ್ರಚಂಡ ಬಹುಮತ ಪಡೆಯಿತು. ರಾಮಕೃಷ್ಣ ಹೆಗಡೆ ಅವರು ಮತ್ತೆ ಮುಖ್ಯಮಂತ್ರಿಯಾದರು. 1988ರಲ್ಲಿ ನಾನಾ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು.

 1996ರಲ್ಲಿ ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ಹೆಗಡೆಯವರು ಪಕ್ಷದ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಜನತಾ ದಳದಿಂದ ಹೊರಬಿದ್ದರು. ಆ ಬಳಿಕ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಮತ್ತು ಲೋಕಶಕ್ತಿ ಪಕ್ಷ ಸ್ಥಾಪಿಸಿದರು. ಮುಂದೆ ಇದು ಜೆಡಿಯು ಜತೆ ವಿಲೀನವಾಯಿತು.

 ದೇಶದಲ್ಲಿ  ಪಂಚಾಯತ್‌ ರಾಜ್‌ ಪರಿಕಲ್ಪನೆಯನ್ನು ಹುಟ್ಟು ಹಾಕಿದವರೇ ರಾಮಕೃಷ್ಣ ಹೆಗಡೆ. ಆ ಬಳಿಕ ಇಡೀ ದೇಶ ಇದನ್ನು ಅಳವಡಿಸಿಕೊಂಡಿತು. ಗ್ರಾಮೀಣಾಭಿವೃದ್ಧಿಗೆ ಇವರು ಹೊಸ ಭಾಷ್ಯ ಬರೆದರು. ಆರ್ಥಿಕ ವಿಚಾರದಲ್ಲೂ ಪರಿಣತರಾಗಿದ್ದರು.

ರಾಮಕೃಷ್ಣ ಹೆಗಡೆ ಅವರು ಕಲೆ, ಸಾಹಿತ್ಯ, ಸಿನಿಮಾ ಇತ್ಯಾದಿ ಸಾಂಸ್ಕೃತಿಕ ವಿಚಾರದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದರು.  2004ರ ಜನವರಿ 12ರಂದು ತಮ್ಮ 77ನೇ ವಯಸ್ಸಿನಲ್ಲಿ ನಿಧನರಾದರು. ಕರ್ನಾಟಕದ ಅತ್ಯಂತ ದಕ್ಷ ಮತ್ತು ಜನಪ್ರಿಯ ಮುಖ್ಯಮಂತ್ರಿಯಾಗಿ ಅವರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.