8. ಮರವಂತೆ, ಕರ್ನಾಟಕ ನದಿ ಮತ್ತು ಸಮುದ್ರ ಸೇರಿದಂತೆ ಕಂಡು ದೂರವಾಗುವ ಅಪರೂಪದ ದೃಶ್ಯವನ್ನು ಮರವಂತೆಯಲ್ಲಿ ಕಾಣಬಹುದು. ಒಂದೆಡೆ ಅರಬೀ ಸಮುದ್ರ, ಮತ್ತೊಂದೆಡೆ ಸೌಪರ್ಣಿಕಾ ನದಿ, ನಡುವೆ ಸೀಳಿಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಗೋಚರಿಸುವುದು ಕೊಡಚಾದ್ರಿ ಬೆಟ್ಟಗಳು. ಇವೆಲ್ಲದರ ನಡುವೆ ಸಾಗರದಲ್ಲಿ ಸೇರಿಹೋಗುವ ಸೂರ್ಯನನ್ನು ನೋಡುವುದು ರಮಣೀಯ ಅನುಭವ

7. ಅಲೆಪ್ಪಿ ಹಿನ್ನೀರು, ಕೇರಳ  ಇಲ್ಲಿನ ಪ್ರಶಾಂತ ಹಿನ್ನೀರಿನಲ್ಲಿ ಮುಳುಗುವ ಸೂರ್ಯಬಿಂಬವನ್ನು ನೋಡುವುದು ದಿವ್ಯ ಅನುಭವ.  ಚತುರ ಕಲಾಕಾರದ ರಚನೆಯಂತೆ ಕಾಣುವ ಹಿನ್ನೀರ ಮಡಿಲಲ್ಲಿ  ಕುಳಿತು, ಕೆಂಪಾಗುವ ದಿಕ್ತಟವನ್ನು ದಿಟ್ಟಿಸುವುದಕ್ಕೆ ಇಲ್ಲಿನ ಸಾಂಪ್ರದಾಯಿಕ ಹೌಸ್‌ಬೋಟ್‌ಗಳು ಸೂಕ್ತ ತಾಣಗಳು.

6. ಆಗುಂಬೆ, ಕರ್ನಾಟಕ  ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತವಾದ ಆಗುಂಬೆಯ ಸೂರ್ಯಾಸ್ತವೂ ಖ್ಯಾತಿವೆತ್ತಿದ್ದೇ.  ಇಲ್ಲಿನ ಮೋಡ ಮುಸುಕಿದ  ಕ್ಷಿತಿಜದಲ್ಲಿ ಮುಳುಗುವ ಸೂರ್ಯನನ್ನು ನೋಡುವುದಕ್ಕೂ ಅದೃಷ್ಟ ಬೇಕೆಂಬುದು ಹೌದಾದರೂ, ಮಳೆಗಾಲದಲ್ಲೇ ಇಲ್ಲಿ ಪ್ರವಾಸಿಗರ ಭರಾಟೆ ಹೆಚ್ಚು.

5. ಜೈಸಲ್ಮೇರ್‌, ರಾಜಸ್ಥಾನ ಹೊಂಬಣ್ಣದ ರೇತಿಯ ಈ ಸ್ಥಳದಲ್ಲಿ ಕಾಣುವುದು ಅದ್ಭುತವಾದ ಕೋಟೆಗಳು ಮತ್ತು ಮರಳು ದಿಬ್ಬಗಳು. ಈ ಭವ್ಯಭವನಗಳ ಹಿನ್ನೆಲೆಯಲ್ಲಿ ಕಂತುವ ಸೂರ್ಯನನ್ನು ನೋಡುವಾಗ, ಎಷ್ಟೇ ಏರಿದರೂ ಮುಂದೊಮ್ಮೆ ಇಳಿಯಲೇ ಬೇಕು ಎಂಬ ಸಂದೇಶವನ್ನು ಅಳಿದ ಅರಸೊತ್ತಿಗೆಗಳು ಉಸುರಿದಂತಾದರೆ ಅಚ್ಚರಿಯಿಲ್ಲ.

4. ಕನ್ಯಾಕುಮಾರಿ, ತಮಿಳುನಾಡು ಭಾರತದ ದಕ್ಷಿಣದ ತುತ್ತತುದಿಯಾದ ಕನ್ಯಾಕುಮಾರಿಯ ಕಡಲತೀರವು ಸೂರ್ಯಾಸ್ತದ ದೃಶ್ಯಗಳಿಗೂ ಪ್ರಸಿದ್ಧ. ಅರಬೀ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳ ಈ ಸಂಗಮ ಸ್ಥಾನ ಮನೋಹರ ಚಿತ್ರಕಾವ್ಯದಂತೆ ಭಾಸವಾಗುತ್ತದೆ.

3. ಮೌಂಟ್‌ ಅಬು, ರಾಜಸ್ಥಾನ ಅರಾವಳಿ ಪರ್ವತ ಶ್ರೇಣಿಯ ಈ ಶಿಖರ, ರಾಜಸ್ಥಾನದ ಏಕಮಾತ್ರ ಗಿರಿಧಾಮ. ಶಿಖರದ ಸೌಂದರ್ಯದೊಂದಿಗೆ ಸೂರ್ಯಾಸ್ತಮಾನದ ರಮಣೀಯತೆಯೂ ಮಿಳಿತಗೊಂಡು, ಕ್ಯಾಮರಾಗಳಿಗೆ ಹಬ್ಬವನ್ನುಂಟು ಮಾಡುತ್ತದೆ

2. ವಾರಾಣಸಿ, ಉತ್ತರಪ್ರದೇಶ ಪವಿತ್ರ ಗಂಗಾನದಿಯ ದಂಡೆಯಲ್ಲಿನ ಈ ಸ್ಥಳ ಹೊತ್ತು ಇಳಿಯುವಾಗ ಆಧ್ಯಾತ್ಮಿಕ ಅನುಭವಗಳಿಗೆ ಸಾಕ್ಷಿಯಾಗುತ್ತದೆ. ಗಂಗೆಗಿಳಿಯುವ ಸೋಪಾನದಲ್ಲಿ  ಹಲವು ರೀತಿಯ ಪ್ರಾರ್ಥನೆಗಳು, ವೇದಘೋಷಗಳು ಮತ್ತು ತೇಲುತ್ತಿರುವ ದೀಪದ ಸೊಡರುಗಳು ಮಾಂತ್ರಿಕ ಲೋಕವನ್ನೇ ತೆರೆದಿಡುತ್ತವೆ

1. ರಣ್‌, ಕಛ್‌, ಗುಜರಾತ್  ಇಲ್ಲಿನ ಬಿಳಿ ರೇತಿಯ ಮರುಭೂಮಿಯಲ್ಲಿ ಸೂರ್ಯಾಸ್ತ ನೋಡುತ್ತಿದ್ದರೆ, ಭ್ರಾಮಕ ಜಗತ್ತಿಗೆ ದೂಡಿದಂತಾಗುತ್ತದೆ. ದಿಗಂತದಲ್ಲಿ ರವಿ ಕಂತುವ ಹೊತ್ತಿಗೆ, ವಿನೂತನ ವರ್ಣ ಛಾಯೆಗಳನ್ನು ಈ ಮರಳುಗಾಡು ತೆರೆದಿಡುತ್ತದೆ.