ನವ ದೆಹಲಿ : ಭಾರತದ ಕ್ರೀಡಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಅದರಲ್ಲೂ ಯವ ಕ್ರೀಡಾಪಟುಗಳು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿ ಹಿಡಿಯುತ್ತಿದ್ದಾರೆ. ಇದೇ ಮಾದರಿಯ ಒಂದು ನೂತನ ದಾಖಲೆಯನ್ನು ಯುವ ಮಹಿಳಾ ಕುಸ್ತಿಪಟು ಅಂತಿಮ್ ಪಂಘಾಲ್ ಸೃಷ್ಟಿಸಿದ್ದಾರೆ. ಅವರು ಬಲ್ಗೇರಿಯಾದಲ್ಲಿ ನಡೆಯುತ್ತಿರುವ ೨೦ರ ವಯೋಮಿತಿಯ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ೫೩ ಕೆ.ಜಿ ವಿಭಾಗದಲ್ಲಿ ಬಂಗಾರ ಗೆಲ್ಲುವುದರೊಂದಿಗೆ ಭಾರತಕ್ಕೆ ಈ ಸ್ಪರ್ಧೆಯಲ್ಲಿ ಸ್ವರ್ಣ ಪದಕ ತಂದುಕೊಟ್ಟ ಮೊದಲ ಮಹಿಳೆ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಬಲ್ಗೇರಿಯಾದ ಸೋಫಿಯಾದಲ್ಲಿ ಶುಕ್ರವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಕಜಕಸ್ತಾನದ ಅಟ್ಲಿನ್ ಶಂಗೆಯೆವಾ ವಿರುದ್ಧ ೮-೦ ಅಂಕಗಳ ಭರ್ಜರಿ ಜಯ ಸಾಧಿಸಿದ ಭಾರತದ ಯುವ ಕುಸ್ತಿಪಟು ಅಗ್ರ ಸ್ಥಾನ ಪಡೆದು ಮಿಂಚಿದರು. ಈ ಮೂಲಕ ೩೪ ವರ್ಷಗಳ ಭಾರತದ ಕುಸ್ತಿ ಸ್ಪರ್ಧೆಯ ಇತಿಹಾಸದಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಮೊಲ ಬಾರಿಗೆ ಬಂಗಾರದ ಪದಕ ಗೆದ್ದ ಸಾಧನೆ ಮಾಡಿದಂತಾಗಿದೆ.
೧೭ ವರ್ಷದ ಹರಿಯಾಣದ ಪ್ರತಿಭೆ ಅಂತಿಮ್ ಈ ಸ್ಪರ್ಧೆಯ ಎಲ್ಲ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದ್ದರು. ಮೊದಲ ಸುತ್ತಿನಲ್ಲಿ ಯುರೋಪ್‌ನ ಒಲಿವಿಯಾ ಆಂಡ್ರಿಚ್ ವಿರುದ್ಧ ೧೧-೦ ಅಂತರದಿಂದ ಗೆಲುವು ಸಾಧಿಸಿದ್ದರೆ, ಎರಡನೇ ಸುತ್ತಿನಲ್ಲಿ ಜಪಾನ್‌ನ ಅಯಾಕ ಕಿಮುರಾ ವಿರುದ್ಧ ಹಾಗೂ ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ನತಾಲಿಯಾ ಕಿವ್‌ಚುಟ್ಸ್ಕಾ ವಿರುದ್ಧ ೧೧-೨ ಅಂಕಗಳಿಂದ ಜಯ ಸಾಧಿಸಿದರು.
ಅಂತಿಮ್ ದೊಡ್ಡ ಅಕ್ಕ ಸರಿತಾ ಪಂಘಾಲ್ ಅವರು ಕಬಡ್ಡಿ ಆಟಗಾರ್ತಿಯಾಗಿದ್ದು, ಭಾರತ ತಂಡದ ಪರ ಆಡುತ್ತಿದ್ದಾರೆ. ಇನ್ನೆರಡು ಸ್ಪರ್ಧೆಗಳಲ್ಲಿ ಸೋನಮ್ ಮಲಿಕ್ ಹಾಗೂ ಪ್ರಿಯಾಂಕ ೬೨ ಹಾಗೂ ೬೫ ಕೆ.ಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ರಿತಿಕಾ (೭೨ ಕೆ.ಜಿ ) ಹಾಗೂ ಸಿತೊ (೫೭ ಕೆ.ಜಿ) ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇದುವರೆಗೆ ಒಟ್ಟಾರೆ ೧೨ ಪದಕಗಳನ್ನು ಗೆದ್ದುಕೊಂಡಿದೆ. ಪುರುಷ ಸ್ಪರ್ಧಿಗಳು ಒಂದು ಬೆಳ್ಳಿ ಹಾಗೂ ಆರು ಕಂಚಿನ ಪದಕಗಳನ್ನು ಗೆದ್ದಿದ್ದು, ಮಹಿಳೆಯರು ಒಂದು ಬಂಗಾರ, ಎರಡು ಬೆಳ್ಳಿ ಹಾಗೂ ಅಷ್ಟೇ ಸಂಖ್ಯೆಯ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅಭಿನಂದನೆಗಳ ಮಹಾಪೂರ
ಬಂಗಾರದ ಪದಕ ಗೆದ್ದು ಸಾಧನೆ ಮಾಡಿರುವ ಭಾರತದ ಯುವ ಕುಸ್ತಿಪಟುವಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶಹಬ್ಬಾಸ್‌ಗಿರಿ ನೀಡಿದ್ದಾರೆ.